ಕೊರೊನಾ ಹೆಮ್ಮಾರಿಗಿಂತಲೂ ಭೀಕರ- ಕೋವಿಡ್ ಸಾವಿಗಿಂತ ಶಿಶು ಸಾವು ಹೆಚ್ಚಳ

Public TV
3 Min Read
vlcsnap 2020 08 26 08h39m25s927 copy

– ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಭೀಕರ ಸತ್ಯ

ಯಾದಗಿರಿ: ಜಿಲ್ಲೆಯಲ್ಲಿ ಸದ್ಯ ಕೊರೊನಾ ಪಾಸಿಟಿವ್‍ಗಳ ಸಂಖ್ಯೆ 5,000 ಸಮೀಪಿಸುತ್ತಿದೆ. ಕೊರೊನಾದಿಂದ ಇಲ್ಲಿಯವರೆಗೆ 33 ಜನ ಸಾವನ್ನಪ್ಪಿದ್ದಾರೆ. ಇದರ ನಡುವೆ ಮತ್ತೊಂದು ಆಘಾತಕಾರಿ ವಿಷಯ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬದಲಾಗಿದ್ದು, ಖಾಸಗಿ ಆಸ್ಪತ್ರೆಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಂದಮ್ಮಗಳು ಬಾಹ್ಯ ಜಗತ್ತಿಗೆ ಬಂದ ಕೆಲವೇ ಗಂಟೆಗಳಲ್ಲಿ ಸಾವನಪ್ಪಿವೆ. ಇದರ ಪರಿಣಾಮ ಯಾದಗಿರಿಯಲ್ಲಿ ಕೊರೊನಾಕ್ಕಿಂತ ಚಿಕಿತ್ಸೆ ಸಿಗದೇ ಸತ್ತ ಹಸುಗೂಸುಗಳ ಸಂಖ್ಯೆಯೇ ಜಾಸ್ತಿಯಾಗಿದೆ.

CORONA VIRUS 7

ಜಿಲ್ಲೆಯಲ್ಲಿ ಮೊದಲೇ ಅಪೌಷ್ಠಿಕತೆ ಕಾರಣದಿಂದ ಸಾವನ್ನಪ್ಪುವ ಕಂದಮ್ಮಗಳ ಸಂಖ್ಯೆ ಮೊದಲು ಹೆಚ್ಚಿತ್ತು. ಆ ಪರಿಸ್ಥಿತಿ ಈಗ ತುಂಬಾನೆ ಕಡಿಮೆ ಆಗಿದೆ. ಆದರೆ ಹೆರಿಗೆ ಟೈಮಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ ಕಂದಮ್ಮಗಳು ಸಾವನ್ನಪ್ಪುತ್ತಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.

ಕೊರೊನಾದಿಂದ ಸತ್ತವರಿಗಿಂತ ಜಿಲ್ಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ, ಅದರಲ್ಲೂ ಆಗತಾನೇ ಜನಿಸಿದ ಕಂದಮ್ಮಗಳು ಹಾಗೇ ಕಣ್ಣು ಮುಚ್ಚಿವೆ. ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಕೇವಲ 33, ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮರಣ ಹೊಂದಿದ ಮಕ್ಕಳ ಸಂಖ್ಯೆ ಬರೋಬ್ಬರಿ 40. ಇದಕ್ಕೆ ಕಾರಣ ಕೊರೊನಾ ನೆಪ ಹೇಳಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದು. ಕೊರೊನಾ ಟೈಮಲ್ಲಿ ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಬೇಕು ಎಮದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆ ಯಾದಗಿರಿ ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್ ಎಂದಿವೆ.

YDR

ಜಿಲ್ಲೆಯಲ್ಲಿ 12 ಹೆರಿಗೆ, 14 ಮಕ್ಕಳ ಆಸ್ಪತ್ರೆ ಸೇರಿ ಒಟ್ಟು 26 ಖಾಸಗಿ ಆಸ್ಪತ್ರೆಗಳಿವೆ. ಕಳೆದ ಏಪ್ರಿಲ್‍ನಿಂದ ಒಂದೆರಡು ಆಸ್ಪತ್ರೆ ಬಿಟ್ಟು, ಉಳಿದೆಲ್ಲಾ ಬಂದ್ ಆಗಿವೆ. ಕೊರೋನಾ ಟೈಮಲ್ಲಿ ಯಾದಗಿರಿಯ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬೇಜವಾಬ್ದಾರಿ ತೋರಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್‍ನಿಂದ ಇಲ್ಲಿಯವರೆಗೆ ಒಟ್ಟು 8,322 ಮಕ್ಕಳು ಜನಿಸಿವೆ. ಇದರಲ್ಲಿ 6,736 ಮಕ್ಕಳು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದರೆ, ಕೇವಲ 1,586 ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಜನಿಸಿವೆ. ಏಪ್ರಿಲ್‍ನಲ್ಲಿ 1,819 ಶಿಶು ಜನನವಾಗಿದ್ದು, 13 ಶಿಶು ಮರಣ ಪ್ರಕರಣಗಳು ವರದಿಯಾಗಿದೆ. ಮೇನಲ್ಲಿ 1,705 ಶಿಶು ಜನನವಾಗಿದ್ದು, 13 ಶಿಶು ಮರಣ ಪ್ರಕರಣಗಳು ವರದಿಯಾಗಿದೆ. ಜೂನ್‍ನಲ್ಲಿ 1293 ಶಿಶು ಜನನವಾಗಿದ್ದು, 07 ಮರಣ ಪ್ರಕರಣಗಳು ವರದಿಯಾಗಿದೆ. ಜುಲೈನಲ್ಲಿ 1,319 ಶಿಶು ಜನನವಾಗಿದ್ದು, 07 ಶಿಶು ಮರಣ ಪ್ರಕರಣಗಳು ವರದಿಯಾಗಿದೆ.

corona 4

ಉಳಿದಂತೆ ಯಾದಗಿರಿ ಖಾಸಗಿ ಆಸ್ಪತ್ರೆಗಳಲ್ಲಿ ಏಪ್ರಿಲ್ 865, ಮೇ 683, ಜೂನ್ 70, ಜುಲೈ 13 ಶಿಶು ಜನನವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಾವು ಸಂಭವಿಸಿರೋದು ದಾಖಲೆಗಳಲ್ಲಿ ಕಂಡು ಬರಲ್ಲ. ಈ ಎಲ್ಲಾ ಅಂಕಿ ಅಂಶಗಳು ಸ್ವತಃ ಜಿಲ್ಲಾ ಆರೋಗ್ಯ ಇಲಾಖೆಯೇ ನೀಡಿದೆ. ಇದರಲ್ಲಿ ಸ್ಪಷ್ಟವಾಗುವುದೇನೆಂದರೆ ಕೊರೊನಾ ನೆಪವನ್ನಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳ ಬಂದ್ ಆಗಿರುವ ಕಾರಣ, ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಚಿಕಿತ್ಸೆ ನೀಡದ ಕಾರಣ, ಮಕ್ಕಳು ಸಾವನ್ನಪ್ಪಿರುವುದು ತಿಳಿಯುತ್ತದೆ.

hospital1

ಜಿಲ್ಲೆಯ ವಿವಿಧ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಹೆರಿಗೆಗೆ ಸುಸಜ್ಜಿತ ಸೌಲಭ್ಯ ಹೊಂದಿಲ್ಲ. ಗ್ರಾಮೀಣ ಜನತೆ ಅಕ್ಕಪಕ್ಕದ ಖಾಸಗಿ ಆಸ್ಪತ್ರೆ ನೆಚ್ಚಿಕೊಂಡಿದ್ದರು. ಆದರೆ ಕೊರೊನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ನಿರಾಕರಿಸಿದ ಕಾರಣ, ಜಿಲ್ಲಾಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಎಷ್ಟೋ ಶಿಶುಗಳು ಮರಣಹೊಂದಿವೆ. ಇಲ್ಲಿ ಖಾಸಗಿ ಆಸ್ಪತ್ರೆಗಳು ಕೇವಲ ತಮಗೆ ಬೇಕಾದವರಿಗೆ ಮಾತ್ರ ಚಿಕಿತ್ಸೆ ನೀಡುತ್ತಿವೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಈ ಆರೋಪದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯ ಮುಖ್ಯ ಅಧಿಕಾರಿಗಳು ಪ್ರಶ್ನೆ ಮಾಡಿದರೆ, ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಚಿಕಿತ್ಸೆ ಲಭಿಸುವಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳುತ್ತಾರೆ. ತಮಗೆ ಬೇಕಾದಾಗ ಆಸ್ಪತ್ರೆಗಳನ್ನು ನಡೆಸುವ, ಮನ ಬಂದಂತೆ ಬಿಲ್ ಮಾಡಿ ಬಡವರಿಂದ ಹಣ ಸುಲಿಯುವ ಖಾಸಗಿ, ಆಸ್ಪತ್ರೆಗಳು ಜನ ಸಂಕಷ್ಟದ ಸಮಯಕ್ಕೆ ಕರಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

Coronavirus 1

Share This Article
Leave a Comment

Leave a Reply

Your email address will not be published. Required fields are marked *