– ದೇವರ ಕೋಣೆಯಲ್ಲಿತ್ತು ಮಗುವಿನ ಶವ
ಚಾಮರಾಜನಗರ: ಮದುವೆಯಾದ ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಹೊಟ್ಟೆಕಿಚ್ಚಿಗೆ ಮೊದಲ ಹೆಂಡತಿಯ ಐದು ವರ್ಷದ ಮಗಳನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಹೌದು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹೇಶ್, ಗೌರಮ್ಮ ದಂಪತಿಗೆ ಕೆಲವು ವರ್ಷಗಳ ಹಿಂದೆ ವಿಚ್ಛೇದನವಾಗಿತ್ತು. ನಂತರ ಮಹೇಶ್ ರತ್ನಮ್ಮನನ್ನು, ಗೌರಮ್ಮ ಮಹದೇವಸ್ವಾಮಿಯನ್ನು ವಿವಾಹವಾಗಿದ್ದರು. ಆದರೆ ಮಹೇಶ್, ರತ್ನಮ್ಮಗೆ ಮಕ್ಕಳಾಗಿರಲಿಲ್ಲ.
ಮಹದೇವಸ್ವಾಮಿ, ಗೌರಮ್ಮ ದಂಪತಿಗೆ 5 ವರ್ಷದ ಹೆಣ್ಣು ಮಗುವಿದ್ದು, ಮಕ್ಕಳಾಗಲಿಲ್ಲ ಅನ್ನೋ ಹೊಟ್ಟೆ ಕಿಚ್ಚಿಗೆ ಮಹೇಶ್, ರತ್ನಮ್ಮ ದಂಪತಿ ಮಗುವನ್ನು ಅಪಹರಿಸಿ ಕೊಲೆ ಮಾಡಿ ಮಗುವಿನ ದೇಹವನ್ನು ಚೀಲದಲ್ಲಿ ಕಟ್ಟಿ ದೇವರ ಕೋಣೆಯಲ್ಲಿಟ್ಟಿದ್ದಾರೆ. ಮಗು ಕಾಣೆಯಾಗಿರುವ ಬಗ್ಗೆ ಮಹದೇವಸ್ವಾಮಿ, ಗೌರಮ್ಮ ದಂಪತಿ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗ ಮಹೇಶ್, ರತ್ನಮ್ಮ ದಂಪತಿ ಮೇಲೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ದಂಪತಿ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ದೇವರ ಕೋಣೆಯಲ್ಲಿ ಮಗುವಿನ ಶವ ಇರುವ ಚೀಲದಲ್ಲಿ ಪತ್ತೆಯಾಗಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.