ಉಡುಪಿ: ಪ್ರೀತಿಸಿ ಮದುವೆಯಾದ ಪತ್ನಿ ಕೊರೊನಾಗೆ ಬಲಿಯಾದ ಕಾರಣ ಮೃತದೇಹಕ್ಕಾಗಿ ಪತಿರಾಯ ಗಲಾಟೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನನಗೆ ಕೊರೊನಾ ಬಂದರೂ ಪರವಾಗಿಲ್ಲ. ನನ್ನ ಪತ್ನಿ ದೇಹವನ್ನಾದರೂ ನನಗೆ ಕೊಡಿ ಅಂತ ಶಾಸಕ ರಘುಪತಿ ಭಟ್ ಬಳಿ ಪತಿ ಗೋಗರೆದಿದ್ದಾರೆ. ಈ ವೇಳೆ ಪಿಪಿಇ ಕಿಟ್ ಧರಿಸುವಂತೆ ಶಾಸಕರು, ವೈದ್ಯರು ಹೇಳಿದರೂ ಪತಿರಾಯ ಕೇಳಿಲ್ಲ. ಆಗ ಜಗಳವೂ ಆಗಿದೆ. ಕೊನೆಗೆ ಅಧಿಕಾರಿಗಳೇ ಕೊರೊನಾ ನಿಯಮದಂತೆ ಅಂತ್ಯಕ್ರಿಯೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತಪಟ್ಟ ಬಳಿಕ ಎರಡನೇ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಮೊದಲ ವರದಿಯಲ್ಲಿ ನೆಗೆಟಿವ್ ಬಂದ ಬಳಿಕ ಎರಡನೇ ವರದಿಯಲ್ಲಿ ಪಾಸಿಟಿವ್ ಬಂದಿರುವುದು ಅನುಮಾನ ಮೂಡಿಸಿದೆ. ಹೀಗಾಗಿ ಪಾಸಿಟಿವ್ ವರದಿ ಕೊಟ್ಟ ಸರ್ಜನ್ ವಿರುದ್ಧ ಮೃತೆ ಮಹಿಳೆಯ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಬಂದ ಸರ್ಜನ್ ಡಾ.ಮಧುಸೂದನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮೃತ ಮಹಿಳೆಯ ಕುಟುಂಬಸ್ಥರು ಸರ್ಜನ್ ಅವರನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಪತ್ನಿಯ ಮೃತದೇಹವನ್ನ ತನಗೆ ಒಪ್ಪಿಸುವಂತೆ ಪತಿ ಆಗ್ರಹಿಸಿದ್ದಾರೆ. ಪ್ರೀತಿಸಿ ಮದುವೆಯಾದ ಪತ್ನಿ ಇಲ್ಲದ ಮೇಲೆ ನಾನೂ ಸತ್ತರೂ ಚಿಂತೆಯಿಲ್ಲ. ಪತ್ನಿಯ ಮೃತದೇಹ ನನಗೆ ಒಪ್ಪಿಸಿ ಎಂದು ಪತಿ ಶಿವಪ್ರಸಾದ್ ತಮ್ಮ ಆಕ್ರೋಶ ಹೊರಹಾಕಿದ ಪ್ರಸಂಗ ನಡೆಯಿತು.