ಹಾಸನ: ಗಣೇಶ ಹಬ್ಬದಂದು ಹಾಡಹಗಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ.
ಕುಮಾರ್ (43) ಕೊಲೆಯಾದ ದುರ್ದೈವಿ. ಕೊಲೆಯಾದ ಕುಮಾರ್ ನಿಂಗೇಗೌಡನ ಕೊಪ್ಪಲು ಬಳಿಯಲ್ಲಿರುವ ಕೆರೆಯಲ್ಲಿ ಬೈಕ್ ತೊಳೆಯಲು ಬಂದಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆರೋಪಿ ಗೋವಿಂದೇಗೌಡ ಹಿಂದಿನಿಂದ ಬಂದು ಬೈಕ್ ತೊಳೆಯುತ್ತಿದ್ದ ಕುಮಾರ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಆರೋಪಿ ಗೋವಿಂದೇಗೌಡನನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದರು. ಕೂಡಲೇ ಸ್ಥಳದಲ್ಲಿದ್ದರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.