ಡಾ.ನಾಗೇಂದ್ರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ – 7 ದಿನಗಳೊಳಗೆ ತನಿಖಾ ವರದಿಗೆ ಸಿಎಂ ಸೂಚನೆ

Public TV
1 Min Read
MYS NAGENDRA

ಮೈಸೂರು: ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ನಾಗೇಂದ್ರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

ಪರಿಹಾರ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ 7 ದಿನಗಳ ಒಳಗೆ ತನಿಖೆ ನಡೆಸಿ ವರದಿ ನೀಡಲು ಮೈಸೂರು ಜಿಲ್ಲಾ ಪ್ರಾದೇಶಿಕ ಆಯ್ತಕರಿಗೆ ಸಿಎಂ ಆದೇಶಿಸಿದ್ದಾರೆ. ಅನುಕಂಪದ ಆಧಾರದ ಮೇಲೆ ಕುಟುಂಬ ಅವಲಂಬಿತರಿಗೆ ಹುದ್ದೆ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

BSY 3 medium

ಈ ಸಂಬಂಧ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಈಗಾಗಲೇ ಸಿಎಂ ಬಿಎಸ್‍ವೈ ದೈವಾಧೀನರಾದ ಆರೋಗ್ಯಾಧಿಕಾರಿ ಶ್ರೀ ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ ಹಾಗು ಮೃತರ ಶ್ರೀಮತಿಯವರಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ ನೀಡಲು ಭರವಸೆ ನೀಡಿದ್ದಾರೆ. ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ 7ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಆರೋಗ್ಯಾಧಿಕಾರಿ ನಾಗೇಂದ್ರ ಗುರುವಾರ ಬೆಳಗ್ಗೆ ಮೈಸೂರಿನ ತಮ್ಮ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಗೇಂದ್ರ ಅವರ ಅಂತಿಮ ದರ್ಶನ ಪಡೆಯಲು ಸುಧಾಕರ್ ಅವರು ಮೈಸೂರಿಗೆ ಹೋಗಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ವೈದ್ಯೆಯೊಬ್ಬರು, 30 ಲಕ್ಷ ಪರಿಹಾರ ಕೊಡ್ತೀರಾ? ನಾವು ವೈದ್ಯರು ನಮ್ಮ ಒಂದು ತಿಂಗಳ ಸಂಬಳ ಕೊಡುತ್ತೇವೆ. ಆದೇ ಕೋಟ್ಯಂತರ ರೂ. ಆಗುತ್ತದೆ. ನೀವು ಹೊರಟು ಹೋಗಿ ಇಲ್ಲಿಂದ ಎಂದು ಸುಧಾಕರ್‍ಗೆ ವೈದ್ಯೆ ತರಾಟೆ ತೆಗೆದುಕೊಂಡರು. ವೈದ್ಯೆಗೆ ಉತ್ತರಿಸಲಾಗದ ಸುಧಾಕರ್ ಅವರು ಮೂಕ ಪ್ರೇಕ್ಷಕರಂತೆ ನಿಂತುಕೊಂಡಿದ್ದರು.

mys doc medium

ನಮಗೆ ಐಎಎಸ್ ಅಧಿಕಾರಿಗಳ ಹಿಡಿತದಿಂದ ತಪ್ಪಿಸಿ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ. ಅವರನ್ನು ಅಮಾನತುಗೊಳಿಸಿ ಎಂದು ಸುಧಾಕರ್ ಅವರಿಗೆ ವೈದ್ಯರು ಒತ್ತಾಯ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *