ನವದೆಹಲಿ: ನನಗೆ ಕರುಣೆ ಬೇಡ, ಅದನ್ನು ಒತ್ತಾಯಿಸುವುದಿಲ್ಲ. ಸುಪ್ರೀಂ ಕೋರ್ಟ್ ನಿಂದ ದಯೆ ಬಯಸುತ್ತಿಲ್ಲ. ನ್ಯಾಯಾಲಯ ಏನೇ ಶಿಕ್ಷೆ ನೀಡದರೂ ಸಂತೋಷದಿಂದ ಅನುಭವಿಸಲು ಸಿದ್ಧನಿದ್ದೇನೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅವಧಿ ನಿಗದಿಪಡಿಸುವ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆರಂಭದಲ್ಲಿ ವಿಚಾರಣೆಯನ್ನು ಮುಂದೂಡಬೇಕು, ಪ್ರಕರಣದಲ್ಲಿ ದೋಷಿ ಎಂದು ಆದೇಶ ನೀಡಿದ್ದು, ತೀರ್ಪು ಪರಿಶೀಲನಾ ಅರ್ಜಿ ಸಲ್ಲಿಸಲಾಗುತ್ತಿದೆ. ಪರಿಶೀಲನೆ ಅರ್ಜಿ ಬಳಿಕ ವಿಚಾರಣೆ ದಿನಾಂಕ ನಿಗದಿ ಮಾಡುವಂತೆ ಅವರು ಮನವಿ ಮಾಡಿದರು.
ಈ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠ, ಶಿಕ್ಷೆಯ ಪ್ರಮಾಣ ನಿಗದಿಪಡಿಸುವ ವಿಚಾರಣೆಯ ಮುಂದೂಡಿಕೆಗೆ ನಿರಾಕರಿಸಿತು. ಈ ವೇಳೆ ಪ್ರಶಾಂತ್ ಭೂಷಣ್ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆ ದಾಖಲಿಸಿದರು. ನ್ಯಾಯಾಲಯದ ತಿರಸ್ಕಾರಕ್ಕೆ ಗುರಿಯಾಗಿದ್ದಕ್ಕೆ ತುಂಬಾ ಬೇಸರವಾಗಿದೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ, ಟೀಕೆಗಳನ್ನು ಮಾಡಬೇಕಾಗುತ್ತದೆ. ನನಗೆ ಕರುಣೆ ಬೇಡ, ನಾನು ಅದನ್ನು ಬಯಸುತ್ತಿಲ್ಲ. ನ್ಯಾಯಾಲಯ ಏನೇ ಶಿಕ್ಷೆ ನೀಡಿದರೂ ಸಂತೋಷದಿಂದ ಅನುಭವಿಸಲು ಸಿದ್ಧನಾಗಿದ್ದೇನೆ ಎಂದರು.
ಮೂರು ದಶಕಗಳಿಂದ ಯಾವ ಘನ ನ್ಯಾಯಾಲಯದ ಗೌರವವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದ್ದೇನೋ ಅದೇ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ನನ್ನನ್ನು ತಪ್ಪಿತಸ್ಥನೆಂದು ಘೋಷಿಸಿದೆ. ನನ್ನನ್ನು ಸಂಪೂರ್ಣವಾಗಿ ತಪ್ಪು ಅರ್ಥ ಮಾಡಿಕೊಂಡಿದ್ದಕ್ಕೆ ನನಗೆ ನೋವಿದೆ. ಉದ್ದೇಶವನ್ನು ಅರಿಯದೆ, ಸ್ಪಷ್ಟ ವಿಚಾರಣೆ ನಡೆಸದೆ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿರುವುದಕ್ಕೆ ಆಘಾತವಾಗಿದೆ ಎಂದಿದ್ದಾರೆ.
ನನ್ನ ಟ್ವೀಟ್‍ಗಳು ನಾಗರಿಕನಾಗಿ ನನ್ನ ಕರ್ತವ್ಯ ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯ ವಿಧಿಸಬಹುದಾದ ಯಾವುದೇ ದಂಡವನ್ನು ಸಲ್ಲಿಸುತ್ತೇನೆ. ಆದರೆ ಕ್ಷಮೆಯಾಚಿಸುವುದಿಲ್ಲ ಎಂದು ಭೂಷಣ್ ಸುಪ್ರೀಂಕೋರ್ಟ್‍ಗೆ ತಿಳಿಸಿದ್ದಾರೆ.
ವಕೀಲ ಪ್ರಶಾಂತ್ ಭೂಷಣ್ ಪರ ರಾಜೀವ್ ದವನ್ ಮತ್ತು ದುಷ್ಯಂತ್ ದವೆ ವಾದ ಮಂಡಿಸಿದರು. ಮರು ಪರಿಶೀಲನೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ರಾಜೀವ್ ದವನ್ ಮನವಿ ಮಾಡಿದರು. ಇದಕ್ಕೆ ನ್ಯಾ.ಗವಾಯಿ ಪ್ರತಿಕ್ರಿಯಿಸಿ, ಆಗಸ್ಟ್ 17ರಂದೇ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಿರಿ ಇನ್ನೂ ಯಾಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ವಕೀಲ ದುಷ್ಯಂತ್ ದವೆ, ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಒಂದು ತಿಂಗಳ ಅವಕಾಶವಿದೆ ಎಂದರು.
ಅಂತಿಮವಾಗಿ ಕೋರ್ಟ್ 3 ದಿನಗಳ ಒಳಗಡೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿತು. ಇದನ್ನೂ ಓದಿ: 2 ಟ್ವೀಟ್‍ನಿಂದ ಅಪರಾಧಿಯಾದ ಭೂಷಣ್
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ಮಹತ್ವದ ತೀರ್ಪು ಪ್ರಕಟಿಸಿತ್ತು.ನ್ಯಾ.ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು `ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿತ್ತು. ಪ್ರಶಾಂತ್ ಭೂಷಣ್ ಅವರಿಗೆ ಈ ಕಾಯ್ದೆಯ ಅಡಿ ಗರಿಷ್ಟ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.
ಸೆಪ್ಟೆಂಬರ್ 2 ರಂದು ಅರುಣ್ ಮಿಶ್ರಾ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಈ ಅವಧಿಯೊಳಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕಿದೆ.