ರಾಯ್ಪುರ: ಮನೆಯ ಮುಂದೆ ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ 60 ವರ್ಷದ ವ್ಯಕ್ತಿಯನ್ನು 20ರ ಆಸುಪಾಸಿನ ಯುವಕರಿಬ್ಬರು ಭಯಾನಕವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್ ಗಢದ ಭಿಲೈ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ರಾಮ್ ಚೌಹಾಣ್ ಅವರನ್ನು ದುರ್ಗೇಶ್ ಸಾಹು ಹಾಗೂ ಲೋಕೇಶ್ ಸಾಹು ಭೀಕರವಾಗಿ ಹತ್ಯೆ ಮಾಡಿದ್ದಾರೆ. ರಾಮ್ ಚೌಹಾಣ್ ದೇಹವನ್ನು ಬ್ಲೇಡ್ ಮೂಲಕ 150 ಪೀಸ್ ಮಾಡಿದ್ದಾರೆ. ಕಾಲುಗಳನ್ನು ಪುಡಿಗೈದು, ತಲೆಯನ್ನು ಜಜ್ಜಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ಚೌಹಾನ್ ಅವರು ಎಂದಿನಂತೆ ರಾತ್ರಿ ಊಟ ಮಗಿಸಿ ಮನೆಯ ಹೊರಗಡೆ ವಾಕ್ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಇಬ್ಬರು ಯುವಕರು ಸಿಗರೇಟ್ ಸೇದುತ್ತಾ, ಮದ್ಯಪಾನ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ತೆರಳಿ ಇಲ್ಲಿ ಮದ್ಯಪಾನ ಮಾಡಬೇಡಿ. ಬೇರೆ ಕಡೆ ಹೋಗಿ ಎಂದು ಹೇಳಿದ್ದಾರೆ.
ವ್ಯಕ್ತಿಯ ಮಾತಿನಿಂದ ರೊಚ್ಚಿಗೆದ್ದ ಯುವಕರು ವಾಗ್ದಾಳಿ ನಡೆಸಿದರು. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಕುಡಿದ ಮತ್ತಿನಲ್ಲಿದ್ದ ಯುವಕರು ವ್ಯಕ್ತಿಯನ್ನು ಮನೆಯೊಳಗಡೆ ಕೂಡಿ ಹಾಕಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ವ್ಯಕ್ತಿ ನಮ್ಮನ್ನು ಇಲ್ಲಿ ಕುಡಿಬೇಡಿ ಅಂದಾಗ ಅವರ ಮಾತನ್ನು ಕೇಳಲು ನಿರಾಕರಿಸಿದೆವು. ಈ ವೇಳೆ ಅವರು ನಮಗೆ ಹೊಡೆದರು. ಇದರಿಂದ ರೊಚ್ಚಿಗೊದ್ದು, ವ್ಯಕ್ತಿಯನ್ನು ಮನೆಯೊಳಗೆ ತಳ್ಳಿ ಬಾಗಿಲು ಹಾಕಿದೆವು ಎಂದಿದ್ದಾರೆ. ಅಲ್ಲದೆ ಮನೆಯೊಳಗೆ ಇದ್ದ ಮಗನನ್ನು ಬೆದರಿಕೆ ಹಾಕಿ ಹೊರಗೆ ಕಳುಹಿಸಿದ್ದಾರೆ. ಬಳಿಕ ಇಬ್ಬರಲ್ಲಿ ಒಬ್ಬ ಬ್ಲೇಡ್ ತೆಗೆದುಕೊಂಡು ವ್ಯಕ್ತಿಯನ್ನು ಕತ್ತರಿಸಲು ಆರಂಭಿಸಿದ್ದಾನೆ. ಇನ್ನೊಬ್ಬ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಬಂದು ವ್ಯಕ್ತಿಯ ಕಾಲುಗಳನ್ನು ಪುಡಿಗೈದಿದ್ದಾನೆ. ನಂತರ ತಲೆಗೆ ಇಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.
ವ್ಯಕ್ತಿಯನ್ನು ಕೊಲೆಗೈದ ನಂತರ ಮನೆಯಿಂದ ಹೊರ ಬಂದ ಆರೋಪಿಗಳು, ಭಯಭೀತನಾಗಿದ್ದ ಮಗನ ಬಳಿ ಹೋದರು. ಅಲ್ಲದೆ ಆತನ ಎದುರು ಚೌಹಾನ್ ಕೊಲೆ ಮಾಡಿರುವುದಾಗಿ ಕೂಗಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿನ್ನನ್ನು ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ. ಆರೋಪಿಗಳಿಬ್ಬರೂ ಮದ್ಯದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.