2 ಟ್ವೀಟ್‌ ಮಾಡಿ ಅಪರಾಧಿಯಾದ ಪ್ರಶಾಂತ್‌ ಭೂಷಣ್‌ – ಶಿಕ್ಷೆ ಏನಿರಬಹುದು?

Public TV
2 Min Read
prashant bhushan 2

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅಪರಾಧಿ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾ. ಅರುಣ್‌ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ‘ನ್ಯಾಯಾಂಗ ನಿಂದನೆ ಕಾಯ್ದೆ’ ಅನ್ವಯ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 20ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.

Supreme Court

ಪ್ರಶಾಂತ್ ಭೂಷಣ್ ಅವರಿಗೆ ಈ ಕಾಯ್ದೆಯ ಅಡಿ ಗರಿಷ್ಟ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.

ಜೂನ್‌ 27 ಹಾಗೂ 29ರಂದು ಭೂಷಣ್‌ ಎರಡು ಟ್ವೀಟ್‌ಗಳನ್ನು ಮಾಡಿದ್ದರು. ಈ ಟ್ವೀಟ್‌ಗಳ ಬಗ್ಗೆ ಭಾರೀ ಚರ್ಚೆ/ ಟೀಕೆ ವ್ಯಕ್ತವಾದ ಬಳಿಕ ಟ್ವಿಟ್ಟರ್‌ ಈ ಎರಡು ಟ್ವೀಟ್‌ಗಳನ್ನು ತೆಗೆದು ಹಾಕಿತ್ತು.

twitter app icon ios

ಈ ಬಗ್ಗೆ ಗ್ವಾಲಿಯರ್ ಮೂಲದ ವಕೀಲರೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ ನಿಮ್ಮ ವಿರುದ್ಧ ನಾವು ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಿತ್ತು.

ಶೋಕಾಸ್‌ ನೋಟಿಸ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಿಂದನೆ ಮಾಡಿ ಟ್ವೀಟ್‌ ಮಾಡಿದ್ದು ತಪ್ಪು. ಅವರು ಬೈಕ್‌ನಲ್ಲಿ ತೆರಳುತ್ತಿರಲಿಲ್ಲ. ನಿಂತಿದ್ದ ಬೈಕ್ ಮೇಲೆ ಹೆಲ್ಮೆಟ್ ಧರಿಸದ್ದೇ ಕುಳಿತ್ತಿದ್ದನ್ನು ಗಮನಿಸುವಲ್ಲಿ ನಾನು ವಿಫಲನಾಗಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

court 1

ಟ್ವೀಟ್ ಗಳ ಬಗ್ಗೆ ಪ್ರಶಾಂತ್ ಭೂಷಣ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ಜುಲೈ 22ರಂದು ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಏಕೆ ನಡೆಸಬಾರದು ಎಂದು ಕೇಳಿ ಶೋಕಾಸ್ ನೋಟಿಸ್‌ ನೀಡಿತ್ತು.

ಟ್ವೀಟ್‌ನಲ್ಲಿ ಏನಿತ್ತು?
ಮೊದಲ ಟ್ವೀಟ್ – ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಕಳೆದ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂಬುದನ್ನು ಇತಿಹಾಸಕಾರರು ಹಿಂದಿರುಗಿ ನೋಡಿದರೆ, ಈ ನಾಶದಲ್ಲಿ ಸುಪ್ರೀಂ ಕೋರ್ಟ್‌ ಪಾತ್ರವನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಕಳೆದ 4 ಜಡ್ಜ್‌ಗಳ ಪಾತ್ರವನ್ನು ಸ್ಪಷ್ಟವಾಗಿ ಗಮನಿಸಬಹುದು.

Prashant Bhushan

ಎರಡನೇ ಟ್ವೀಟ್‌: ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್‌ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ಕೊರೊನಾ ಲಾಕ್‌ಡೌನ್‌ ಎಂದು ರಜೆ ಹಾಕಿ ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗದ ಸಮಯದಲ್ಲಿ ಬೈಕ್‌ ಸವಾರಿ ಮಾಡಿದ್ದಾರೆ.

ಈ ಎರಡು ಟ್ವೀಟ್‌ ಅಲ್ಲದೇ 2009ರಲ್ಲಿ ತೆಹಲ್ಕಾ ಮ್ಯಾಗಜಿನ್‌ಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *