ಬೆಂಗಳೂರು: ನಿಮ್ಮ ಬಳಿ ಮದ್ದು ಗುಂಡುಗಳಿವೆಯಾ, ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸರಿಯಾಗಿ ಹಾಕಿಕೊಳ್ಳಿ. ಯಾವುದೇ ಕ್ಷಣದಲ್ಲಿ ಏನೇ ಘಟಿಸಿದರೂ ಎದುರಿಸಲು ಸಿದ್ಧರಾಗಿ ಎಂದು ಕೆಎಸ್‍ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಡಿಜೆ ಹಳ್ಳಿಯ ಗಲಭೆ ಪ್ರಕರಣದಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿದ್ದು, ಸಿಬ್ಬಂದಿ ಯೋಗಕ್ಷೇಮ ವಿಚಾರಿಸಲು ಅಲೋಕ್ ಕುಮಾರ್ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಕೆಜೆ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಾದ ಹಾನಿಯ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಘಟನೆ ವಿವರ ಪಡೆದಿದ್ದಾರೆ. ಈ ವೇಳೆ ಸಿಬ್ಬಂದಿಗೆ ಎಚ್ಚರದಿಂದಿರುವಂತೆ ಸೂಚನೆಯನ್ನೂ ನೀಡಿದ್ದಾರೆ.
ನಿನ್ನೆ ರಾತ್ರಿ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ದುರ್ಘಟನೆಯಲ್ಲಿ ಹಲ್ಲೆಗೊಳಗಾದ ನಾಲ್ಕು ಜನ ಕೆಎಸ್‍ಆರ್‍ಪಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳಾಗಿವೆ. ಘಟನೆಯಲ್ಲಿ ನಾಲ್ಕು ಪೊಲೀಸ್ ವಾಹನಗಳು ಸುಟ್ಟು ಕರಕಲಾಗಿವೆ. ಇದರಲ್ಲಿ 20 ಜನರಿಗೆ ಗಾಯಗಳಾಗಿದ್ದು, 4 ಜನರಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ಅಲೋಕ್ ಕುಮಾರ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿದ್ದವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದು, ಕೆಜೆ ಹಳ್ಳಿ, ಡಿಜೆ ಹಳ್ಳಿ ಸುತ್ತ 50 ಕೆಎಸ್‍ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಪೂರ್ಣ ಭದ್ರತೆ ಕಲ್ಪಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.