– ಘಟನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ
ಬೆಂಗಳೂರು: ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆ ದಾಳಿಗೂ ಮುನ್ನ ಪಾಲಿಕೆ ಹಾಗೂ ಖಾಸಗಿಯಾಗಿ ಹಾಕಿರುವ ಎಲ್ಲಾ ಸಿಸಿಟಿವಿಗಳನ್ನ ಕಿಡಿಗೇಡಿಗಳು ಧ್ವಂಸ ಮಾಡಿದ್ದು, ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದುಷ್ಕರ್ಮಿಗಳು ಮನೆ ಜಖಂ ಮಾಡಿದ್ದಲ್ಲದೇ ಮನೆಯಲ್ಲಿರುವ ಲ್ಯಾಪ್‍ಟಾಪ್ ತಂದು ಹೊಡೆದು ಹಾಕಿದ್ದಾರೆ. ಅಲ್ಲದೇ ಒಂದೇ ಮನೆಯ ಎರಡು ಕಾರು, ಎರಡು ಬೈಕ್‍ಗೆ ಬೆಂಕಿ ಹಾಕಿದ್ದಾರೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಿಡಿಗೇಡಿಗಳು ಲಾಂಗು, ಮಚ್ಚು ಹಿಡಿದು ದಾಳಿ ಮಾಡಿದ್ದಾರೆ. ಅಲ್ಲದೇ ಕಲ್ಲುಗಳನ್ನು ಮನೆಯ ಮೇಲೆ ಎಸೆಯುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಾಸಕರ ಮನೆ ಹಾಗೂ ದಾಳಿ ಮಾಡುವ ಜಾಗದಲ್ಲಿರುವ ಎಲ್ಲಾ ಸಿಸಿಟಿವಿಗಳನ್ನ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ದಾಳಿಯ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗದ ರೀತಿ ನೋಡಿಕೊಳ್ಳುವ ದೃಷ್ಟಿಯಿಂದ ದುಷ್ಕರ್ಮಿಗಳು ಪ್ಲಾನ್ ಮಾಡಿ ಕಾವಲ್ ಬೈರಸಂದ್ರದ ಏರಿಯಾದಲ್ಲಿದ್ದ ಎಲ್ಲ ಸಿಸಿಟಿಗಳನ್ನ ಧ್ವಂಸ ಮಾಡಿದ್ದಾರೆ.
ನೋವಿನ ಕಥೆ:
ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಇದೆ. ಸಾಲ ಸೋಲ ಮಾಡಿ ಹೊಸದಾಗಿ ಮನೆ ಮಾಡಿಕೊಂಡಿದ್ವಿ. ಈಗ ಸಂಪೂರ್ಣ ಹಾಳು ಮಾಡಿದ್ದಾರೆ. ಚಿಕ್ಕ ಮಗು ಇಟ್ಟುಕೊಂಡು ನಾವು ಹೇಗೆ ಬದುಕಬೇಕು ಎಂದು ಗಲಭೆಯಲ್ಲಿ ಹಾನಿಯದ ಕುಟುಂಬ ಕಣ್ಣೀರು ಹಾಕಿದೆ. ಮತ್ತೊಂದು ಕಡೆ ಗಲಾಟೆ ವೇಳೆ ನಾಲ್ವರು ಜೀವ ಭಯದಿಂದ ಬಾತ್ ರೂಮ್‍ನಲ್ಲಿ ಮೂರು ಗಂಟೆಗಳ ಕಾಲ ಬಚ್ಚಿಟ್ಟುಕೊಂಡು ಜೀವ ಉಳಿಸಿಕೊಂಡಿದ್ವಿ ಎಂದು ಮತ್ತೊಂದು ಕುಟುಂಬ ಹೇಳಿದೆ.
ಇನ್ನೂ ಆರೋಪಿ ನವೀನ್ ಮನೆಗೆ ದಾಳಿಯಾಗುವ ಕೆಲವೇ ನಿಮಿಷಗಳ ಹಿಂದೆ ನವೀನ್ ಮನೆಯಲ್ಲಿದ್ದ ಆರು ಜನರನ್ನು ಪಕ್ಕದ ಮನೆಗೆ ಸ್ಥಳೀಯರು ಶಿಫ್ಟ್ ಮಾಡಿದ್ದಾರೆ. ಈ ವೇಳೆ ಲಾಕರ್ ತೆಗೆದು ಚಿನ್ನಾಭರಣ, ಬೆಳ್ಳಿ ವಸ್ತುಗಳು, ಹಣ ದೋಚಿದ್ದಾರೆ. ಈ ಬಗ್ಗೆ ಆರೋಪಿ ನವೀನ್ ಕುಟುಂಬಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.