ಬಳ್ಳಾರಿ: ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದ ಮಗ. ಪುತ್ರನನ್ನು ಕಾಪಾಡಲು ಹೋದ ತಂದೆ ಜೊತೆಗೆ ಮಗನೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಲೂಕಿನ ಚಳುಗುರ್ಕಿ ದೇವಸ್ಥಾನದ ಹತ್ತಿರ ನಡೆದಿದೆ.
ಸಿದ್ದಲಿಂಗಪ್ಪ (50) ಮತ್ತು ಮಗ ದರ್ಶನ್ (14) ಮೃತರು. ಹೊಲದಲ್ಲಿ ಕೆಲಸ ಮುಗಿಸಿ ಪಕ್ಕದಲ್ಲಿಯೇ ಇದ್ದ ಕೃಷಿಹೊಂಡಕ್ಕೆ ನೀರು ಕುಡಿಯಲು ದರ್ಶನ್ ಹೋಗಿದ್ದನು. ಈ ವೇಳೆ ದರ್ಶನ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಮಗನ್ನು ಕಾಪಾಡಲು ಹೋದ ಸಿದ್ದಲಿಂಗಪ್ಪ ಕೂಡ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಗ್ರಾಮದ ನಿವಾಸಿ ಸುರೇಶ್, ನರೇಗಾ ಯೋಜನೆಯಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆ. ಆದರೆ ಕೃಷಿ ಹೊಂಡದ ಸುತ್ತಲು ಯಾವುದೇ ಭದ್ರತೆ ಇಲ್ಲ. ಸಾಕಷ್ಟು ಜನರು ಈ ಪ್ರದೇಶದಲ್ಲಿ ಓಡಾಡುತ್ತಾರೆ. ಕೆಲ ಮಕ್ಕಳು ಈಜಾಡಲು ಸಹ ಹೋಗುತ್ತಾರೆ. ಭದ್ರತೆ ಇಲ್ಲದ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕುರಿತು ಪರಮದೇವನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳದಲ್ಲಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.