-ಹೋರಾಟದಲ್ಲಿ ಭಾಗವಹಿಸಿದ್ದ ಕೊಡಗಿನ ಸೋಮೇಶ್
ಮಡಿಕೇರಿ: ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ನಡೆದಿರುವ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಆಪಾರ. ಇಡೀ ಹೋರಾಟಕ್ಕೆ ವೈಚಾರಿಕತೆಯ ಆಯಾಮ ನೀಡಿದ್ದು ಸಹ ಇಲ್ಲಿಂದ. ರಾಮ ಜನ್ಮಭೂಮಿಯ ಹೋರಾಟ ಇಡೀ ದೇಶಕ್ಕೆ ಸಂಬಂಧಿಸಿದ್ದಾದರೂ, ದಕ್ಷಿಣ ಭಾರತದ ಮಟ್ಟಿಗೆ ಕರ್ನಾಟಕದ ಕೊಡುಗೆ ಹೆಚ್ಚಿನದ್ದಾಗಿದೆ. 1960 ರಿಂದ 2019 ರ ತನಕ ವಿವಿಧ ಆಯಾಮಗಳಲ್ಲಿ ರಾಜ್ಯದಲ್ಲಿ ಹೋರಾಟ ನಡೆದಿದೆ.
ಲಕ್ಷಾಂತರ ಜನ ವಿವಿಧ ಸಂಕಲ್ಪಗಳ ಮೂಲಕ ಬೆಂಬಲ ನೀಡಿದ್ರು. ಅದರಲ್ಲೂ ಕೊಡಗಿನಲ್ಲಿಯೂ ರಾಮ ಜನ್ಮ ಭೂಮಿ ನಿರ್ಮಾಣವಾಗಬೇಕೆಂದು ಇಂದಿಗೂ ಶಬರಿಯಂತೆ ರಾಮ ಜನ್ಮ ಭೂಮಿಯಿಂದ ತಂದ ಮೃತ್ತಿಕೆ(ಮಣ್ಣು)ಯನ್ನು ತಂದ ಸೋಮೇಸ್ ಸುಮಾರು 30 ವರ್ಷಗಳಿಂದ ನಿತ್ಯ ಪೂಜೆ ಮಾಡುತ್ತಿದ್ದಾರೆ.
ಮಂಜಿನ ನಗರಿ ಮಡಿಕೇರಿಯಲ್ಲಿ ನೆಲೆಸಿರುವ ಸೋಮೇಶ್ ರಾಮ ಜನ್ಮ ಭೂಮಿ ಹೋರಾಟದಲ್ಲಿ ಭಾಗವಹಿಸಿದ್ರು. 1990ರಲ್ಲಿ ಅಯೋಧ್ಯೆಕರಸೇವೆ ಸಮಯದಲ್ಲಿ ಉಂಟಾದ ಗಲಾಟೆ ವೇಳೆ ವಿಶ್ವ ಹಿಂದೂ ಪರಿಷತ್ತ್ ನ ಅಗಿನ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಅವರ ತಲೆಗೆ ಕಲ್ಲೇಟು ಬಿದ್ದಿತ್ತು. ರಕ್ತ ಹರಿಯುತ್ತಿರುವ ಸಂದರ್ಭದಲ್ಲಿ ಸಿಂಘಾಲ್ ಅವರ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿದು ರಕ್ತವನ್ನು ತಡೆ ಹಿಡಿಯುವ ಕೆಲಸ ಅಂದಿನ ದಿನಗಳಲ್ಲಿ ಸೋಮೇಶ್ ಮಾಡಿದ್ದರು.
1990 ಆಗಸ್ಟ್ 30: ಅಯೋಧ್ಯೆಯ ಹನುಮಾನ್ ಗಡಿಯಲ್ಲಿ ಗಲಾಟೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಕೈನಲ್ಲಿದ್ದ ಟವೆಲ್ ತೆಗೆದು ಅವರ ತಲೆ ಹಿಡಿದು ಶ್ರೀರಾಮ ಅಸ್ಪತ್ರೆಗೆ ಕರೆದುಕೊಂಡು ಹೋದೆವು. ಒಂದು ದಿನ ಅಲ್ಲಿಯೇ ಉಳಿದು ಸ್ಥಳೀಯ ಸಂಘಟನೆಯ ಕಾರ್ಯಕರ್ತರ ಮನೆಗೆ ತೆರಳಿದೆವು. ಅಲ್ಲಿಯೇ ಒಂದು ದಿನ ಸಿಂಘಾಲ್ ಅವರಿಗೆ ಸಹಾಯಕನಾಗಿದ್ದೆ. ನವೆಂಬರ್ 5 ರವರೆಗೆ ಅಯೋಧ್ಯೆಯಲ್ಲಿದ್ದು, ನಂತರ ಶ್ರೀರಾಮನ ದರ್ಶನ ಪಡೆದು ಅಲ್ಲಿನ ಮೃತ್ತಿಕೆಯನ್ನು ಕರವಸ್ತ್ರದಲ್ಲಿ ಕಟ್ಟಿಕೊಂಡು ತಂದಿದೆ. ಈಗಲೂ ಈ ಮಣ್ಣಿಗೆ ದಿನ ನಿತ್ಯ ಪೂಜೆ ಸಲ್ಲಿಸುತ್ತಿದೇವೆ ಎಂದು ಸೋಮೇಶ್ ಹೇಳುತ್ತಾರೆ.
ಈಗ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಹಿಂದೂ ಧರ್ಮದ ಪ್ರತಿಯೊಬ್ಬರಿಗೂ ಖುಷಿಯಾಗುತ್ತಿದೆ. ಅದರಲ್ಲೂ ನಮ್ಮ ಹಿರಿಯರು ತ್ಯಾಗ ಬಲಿದಾನ ಮಾಡಿರುವುದು ಇಲ್ಲಿ ನಾವು ಸ್ಮರಿಸಬೇಕು ಎಂದು ಸೋಮೇಶ್ ತಿಳಿಸಿದ್ರು.