ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದೆ ಅಂತ ಪ್ರಚಾರ ಗಿಟ್ಟಿಸುವ ಆರೋಗ್ಯ ಸಚಿವ ಶ್ರೀರಾಮುಲು ಕಣ್ಣಿಲ್ಲದ ಕುರುಡನೆಂದು ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಪತ್ರಿಕಾಭವನದಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನನ್ನ ಅವಧಿಯಲ್ಲಿ ಆದಂತಹ ಚಿಕ್ಕಕೆರೆಗೆ ಹರಿಸುವ ತುಂಗಭದ್ರಾ ಹಿನ್ನೀರು ಯೋಜನೆಗೆ ನೀ ಯಾಕೆ ಪೂಜೆ ಸಲ್ಲಿಸ್ತೀಯ? ಅದು ನನ್ನ ಹೋರಾಟದ ಫಲವಾಗಿ ಆ ಯೋಜನೆ ಬಂದಿದೆ. ಅಲ್ಲದೇ ನೀನು ಬುರುಡೆ ರಾಮುಲು ಎಂದು ನಮ್ಮ ಕ್ಷೇತ್ರದ ಜನರಲ್ಲದೇ ರಾಜ್ಯದ ಜನರಿಗೆ ಗೊತ್ತಿದೆ. ನೀನು ಈ ಯೋಜನೆ ಮಾಡಿಸಿರುವುದೇ ಸತ್ಯವಾಗಿದ್ದರೆ, ಬಳ್ಳಾರಿಯ ದುರ್ಗಮ್ಮನ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡು. ಅಲ್ಲಿ ನಮ್ಮ ಸತ್ಯಾಸತ್ಯ ಸಾಭೀತಾಗಲಿ ಎಂದು ಸವಾಲು ಹಾಕಿದರು.
ನಾನು ಒಬ್ಬನೇ ಬರುತ್ತೇನೆ ನಿನ್ನಂತೆ ದುಡ್ಡುಕೊಟ್ಟು ಜನಕಟ್ಟಿಕೊಂಡು ಬರಲ್ಲ. ಈ ಶ್ರೀರಾಮುಲುರಂಥ ಸುಳ್ಳನನ್ನು ಬಿಎಸ್‍ವೈ ಸಚಿವ ಸಂಪುಟದಲ್ಲಿಟ್ಟುಕೊಂಡಿದ್ದಾರೆ. ಮೊದಲು ಇಂಥವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಅಂತ ಒತ್ತಾಯಿಸಿದರು. ಮೊಳಕಾಲ್ಮೂರಿಗೆ ನಾನು ತಂದಿದ್ದ ಹಲವಾರು ಯೋಜನೆಗಳನ್ನು ದುಡ್ಡು ಹೊಡೆಯುವ ಸಲುವಾಗಿ ಅವುಗಳನ್ನು ಬದಲಿಸಿ, ಚಕ್ ಡ್ಯಾಂ ಮಾಡಿ ಗುತ್ತಿಗೆದಾರರಿಗೆ ಲಾಭ ಬರುವಂತೆ ಮಾಡಿದ್ದಾನೆ ಎಂದು ಆರೋಪ ಮಾಡಿದರು. ನಿನ್ನದು ಎಂತಹ ಮಾನವೀಯತೆ, ಸ್ವಲ್ಪ ಕ್ಷೇತ್ರದ ವಿಚಾರದಲ್ಲಿ ಮನುಷತ್ವ ಇಟ್ಟಿಕೊಂಡು ಕೆಲಸ ಮಾಡು. ನಾನು ವಾಲ್ಮೀಕಿ ಸಮುದಾಯವನು ಎಂದು ಪದೇ ಪದೇ ಬೋಗಸ್ ಭಾಷಣ ಮಾಡುವ ರಾಮುಲು ಆ ಸಮುದಾಯದ ಏಳಿಗೆಗೆ ಎಷ್ಟು ಹಣ ಮೀಸಲಿಟ್ಟಿದ್ದಾರೆ. ಇಂತಹ ನಾಚಿಕೆಗೇಡಿನ ಯಾಕೆ ರಾಜಕೀಯ ಮಾಡುತ್ತೀಯಾ?. ನಿನಗೆ ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದರು.
ಬಳ್ಳಾರಿಯಿಂದ ಮೊಳಕಾಲ್ಮೂರಿಗೆ ದಾಸಯ್ಯನ ರೀತಿ ಡ್ರಸ್ ಹಾಕಿಕೊಂಡು ಬಂದು ಸುಳ್ಳು ಹೇಳಿದರೆ ಇಲ್ಲಿ ಯಾರು ನಂಬಲ್ಲ. ರಾಜ್ಯದಲ್ಲಿ ನಿನ್ನ ಬುರುಡೆ ರಾಮುಲು ಅಂತಾರೆ, ನನ್ನನ್ನೇ ವಂಚಿಸಿದ ವಚನಭ್ರಷ್ಟ ನೀನು. ರಾಜಕಾರಣಿಗಳು ಪ್ರತಿಯೊಬ್ಬರಿಗೂ ಗೌರವ ನೀಡುವಂತೆ ನಡೆದುಕೊಳ್ಳಬೇಕು. ಆದರೆ ನೀನು ಬರೀ ಸುಳ್ಳು ಹೇಳಿಕೊಂಡು ಬದುಕುವ ಜಾಯಮಾನದವನು ಎಂದು ಕಿಡಿಕಾರಿದರು
ನಮ್ಮ ಕ್ಷೇತ್ರ ಸಾಕಾಗಿ ಚಳ್ಳಕೆರೆ ಕ್ಷೇತ್ರದಲ್ಲೂ ದೊಂಬರಾಟ ಆಡುತ್ತಿದ್ದೀಯಾ. ಶಾಸಕ ರಘುಮೂರ್ತಿ ತಂದ ವಿವಿ ಸಾಗರದ ನೀರಿಗೆ ನೀನು ಭಾಗಿನ ಅರ್ಪಿಸಿ, ಸೇಬಿನ ಹರ ಹಾಕಿಸಿಕೊಂಡಿದ್ದೀಯಾ. ಆಟೋ, ಲಾರಿಗಳಲ್ಲಿ ಜನರನ್ನು ಕರೆಸಿ, ಕೊರೊನಾ ವೇಳೆ ದೊಂಬಿ ಎಬ್ಬಿಸಿ ನನಗೆ ಗೊತ್ತಿಲ್ಲ ಅನ್ನುತ್ತೀಯ. ನಿನಗೊಂದು ನ್ಯಾಯ, ಕಾಂಗ್ರೆಸ್ ಶಾಸಕರಿಗೊಂದು ನ್ಯಾಯ ಮಾಡುತ್ತೀಯಾ. ಜನರನ್ನು ಮರಳು ಮಾಡುವ ಕೆಲಸಗಳು ಬಹಳ ದಿನ ನಡೆಯಲ್ಲ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಈ ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಎರಡನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ನದಿ ಜೋಡಣೆ ಸಹ ಮಾಡಲಿಲ್ಲ. ಇವರ ನಾಯಕರಲ್ಲೇ ಗೊಂದಲ ಇದೆ. ಇನ್ಯಾವಾಗ ಅಭಿವೃದ್ಧಿ ಮಾಡುತ್ತಾರೆ ಅಂತ ಪ್ರಶ್ನಿಸಿದರು.
ಹಾಗೆಯೇ ಬಳ್ಳಾರಿಯನ್ನು ಕೆಡಿಸಿ ಬಂದು ಈಗ ಮೊಳಕಾಲ್ಮೂರು ಕೆಡಿಸುತ್ತಿದ್ದಾನೆ. ಮರಳು ದಂಧೆಯಿಂದ ಕ್ಷೇತ್ರವನ್ನು ಹಾಳು ಮಾಡಿದ ದಂಧೆಕೋರ ನೀನು. ನಾಯಕ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತು ಎಲ್ಲೋಯ್ತು. ನಿಮಗೆ, ಸಿಎಂಗೆ ಆ ಮಾತು ನೆನಪಿದೆಯೇ ಸಚಿವರೇ ಅಂತ ಗುಡುಗಿದ ತಿಪ್ಪೇಸ್ವಾಮಿ, ಜಿಲ್ಲೆಯಲ್ಲಿ ಕಲಾವಿದರು, ಅಥಿತಿ ಉಪನ್ಯಾಸಕರು ಬೀದಿಗೆ ಬಿದ್ದಿದ್ದಾರೆ ಇದು ನಿನ್ನ ಕಣ್ಣಿಗೆ ಕಾಣಿಸಿಲ್ಲ ಅಲ್ವಾ ಎಂದು ಚಾಟಿ ಬೀಸಿದರು.