ಉಡುಪಿ: ಹದಿನೈದು ದಿನಗಳ ಕಾಲ ತಣ್ಣಗಾಗಿದ್ದ ವರುಣ ದೇವ ಮುಂದಿನ ನಾಲ್ಕು ದಿನಗಳ ಕಾಲ ಉಡುಪಿಯಲ್ಲಿ ಅಬ್ಬರಿಸಲಿದ್ದಾನೆ. ಈ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ 10 ದಿನಗಳಿಂದಲೂ ಉಡುಪಿಯಲ್ಲಿ ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು. ಇದೀಗ ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಪ್ರತಿದಿನ 120 ಮಿಲಿ ಮೀಟರ್ ನಷ್ಟು ಮಳೆ ಬೀಳಲಿದೆ. ಹವಾಮಾನ ಇಲಾಖೆ ವಿಪತ್ತು ನಿರ್ವಹಣಾ ತಂಡಗಳಿಗೂ ಸೂಚನೆ ನೀಡಿದ್ದು, ಮುಂದಿನ ನಾಲ್ಕು ದಿನ ಎಲ್ಲರೂ ಸನ್ನದ್ಧರಾಗಿ ಇರಬೇಕು. ರಜೆ ಮಾಡದೆ ಕೇಂದ್ರ ಸ್ಥಾನದಲ್ಲಿ ಇರಿ ಎಂದು ಸೂಚನೆ ನೀಡಿದೆ. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು. ಸಮುದ್ರಕ್ಕೆ, ನದಿಗೆ ಯಾರೂ ಇಳಿಯಬಾರದು ಎಂದು ಹೇಳಿದೆ.
ಅರಬ್ಬಿ ಸಮುದ್ರದಲ್ಲಿ ರಭಸವಾದ ಗಾಳಿ ಬೀಸಲಿದ್ದು ನಾಡದೋಣಿ ಮೀನುಗಾರಿಕೆ ನಡೆಸುವವರು ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ವಿಪರೀತ ಗಾಳಿ ಇದ್ದಾಗ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ನೋಡಿಕೊಳ್ಳಬೇಕೆಂದು ಹವಾಮಾನ ಇಲಾಖೆ ಮೀನುಗಾರಿಕೆ ಇಲಾಖೆಗೆ ನೋಟಿಸ್ ಹೊರಡಿಸಿದೆ. ವಾಡಿಕೆಯಂತೆ ಕರಾವಳಿಯಲ್ಲಿ ನಾಗರ ಪಂಚಮಿ ಹಬ್ಬದ ನಂತರ ಭಾರೀ ಮಳೆಯಾಗಲಿದೆ. ಆದರೆ ಈ ಬಾರಿ ಒಂದು ವಾರದ ನಂತರ ಮಳೆಯಾಗಲಿದೆ.