ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

Public TV
1 Min Read
businessman hospital

– ಕಚೇರಿಯನ್ನೇ ಆಸ್ಪತ್ರೆಯಾಗಿ ಪರಿವರ್ತಿಸಿದ

ಗಾಂಧಿನಗರ: ಕೊರೊನಾ ಸೋಂಕಿನಿಂದ ಗುಣಮುಖರಾದ ಬ್ಯುಸಿನೆಸ್ ಮ್ಯಾನ್ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಮಾನವೀಯತೆ ಮೆರೆದಿದ್ದಾರೆ.

ಗುಜರಾತ್‍ನ ಸೂರತ್‍ನಲ್ಲಿ ಕಾದರ್ ಶೈಖ್ ಅವರು ಕೊರೊನಾ ಸೋಂಕಿತ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು, 85 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ. ತಮಗೆ ಕೊರೊನಾ ತಗುಲಿ 20 ದಿನಗಳ ಕಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು, ಗುಣಮುಖರಾದ ಬಳಿಕ ಶೈಖ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಚಿಕಿತ್ಸೆಗೆ ತಗಲುವ ಭಾರೀ ಪ್ರಮಾಣದ ವೆಚ್ಚದಿಂದ ಬೇಸತ್ತು, ಬಡವರು ಈ ಪರಿಪ್ರಮಾಣದ ಶುಲ್ಕವನ್ನು ಹೇಗೆ ಭರಿಸುತ್ತಾರೆ ಎಂದು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

CORONA VIRUS 3

ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ಚಿಕಿತ್ಸೆಯ ಶುಲ್ಕ ಕಂಡು ಬೆಚ್ಚಿಬಿದ್ದೆ. ಇಷ್ಟೊಂದು ಶುಲ್ಕವನ್ನು ಬಡವರು ಹೇಗೆ ಭರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ಹೀಗಾಗಿ ಏನಾದರೂ ಮಾಡಬೇಕು, ಕೊರೊನಾ ವಿರುದ್ಧದ ಹೋರಾಟದಲ್ಲಿ ನಾನೂ ಕೊಡುಗೆ ನೀಡಬೇಕು ಎಂದೆನಿಸಿ ನನ್ನ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯನ್ನಾಗಿ ಬದಲಿಸಿದೆ ಎಂದು ಪ್ರಾಪರ್ಟಿ ಡೆವಲಪರ್ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಶೈಖ್ ಅವರು ತನ್ನ 30,000 ಚ.ಅಡಿ ಕಚೇರಿ ಜಾಗದಲ್ಲಿ ಆಸ್ಪತ್ರೆ ಸೆಟ್ ಹಾಕಲು ಸ್ಥಳೀಯ ಆಡಳಿತದಿಂದ ಅವಕಾಶ ಪಡೆದಿದ್ದಾರೆ. ಸರ್ಕಾರ ಅಗತ್ಯ ಸೌಲಭ್ಯ, ಸಿಬ್ಬಂದಿ, ವೈದ್ಯಕೀಯ ಸಲಕರಣೆ ಹಾಗೂ ಔಷಧಿಯನ್ನು ನೀಡಿದೆ. ಶೈಖ್ ಅವರು ತಮ್ಮದೇ ಖರ್ಚಿನಲ್ಲಿ ಹಾಸಿಗೆ, ಇತರೆ ಸಲಕರಣೆ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದಾರೆ.

swab1 1280p

ಯಾವುದೇ ಜಾತಿ, ಧರ್ಮದವರಾಗಿರಲಿ ಯಾರಾದರೂ ಆಸ್ಪತ್ರೆಗೆ ದಾಖಲಾಗಬಹುದು ಎಂದು ಶೈಖ್ ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಲಕ್ಷ ದಾಟುತ್ತಿದ್ದು, 35 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *