ಕೊರೊನಾ ಪಾಸಿಟಿವ್‍ಅನ್ನು ನಿಮ್ಮ ಪಾಸಿಟಿವ್ ಆಲೋಚನೆಯ ಮೂಲಕ ಗೆಲ್ಲಿ: ಸುಮಲತಾ

Public TV
2 Min Read
SUMALATHA

ಬೆಂಗಳೂರು: ಸಂಸದೆ ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರಿಗೆ ಕೊರೊನಾ ನೆಗೆಟಿವ್ ಬಂದಿದ್ದು, ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ: ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣೋದು ಸರಿಯಲ್ಲ: ಸುಮಲತಾ

ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅವರು, “ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಕೋವಿಡ್‍ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಪರೀಕ್ಷೆಯ ನಂತರ ನಾನೀಗ ಕೋವಿಡ್ 19 ನೆಗೆಟಿವ್ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲ್ಕು ವಾರದ ವಿಶ್ರಾಂತಿ ಪಡೆದು, ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ” ಜನರಿಗೆ ತಿಳಿಸಿದ್ದಾರೆ.

corona 9

ಪೋಸ್ಟ್‌ನಲ್ಲಿ ಏನಿದೆ?
ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಕೋವಿನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಮಗದೊಮ್ಮೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಈ ಸುದ್ದಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

home quarantine 1584463060642

ತಮ್ಮೊಂದಿಗೆ ಲವಲವಿಕೆಯಿಂದ ಬೆರೆಯಲು ಇನ್ನೂ ನಾಲ್ಕೈದು ವಾರ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ನನಗೆ ಸಲಹೆ ನೀಡಿದ್ದಾರೆ. ದೇಹಕ್ಕೆ ಚೈತನ್ಯ ತುಂಬಲು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಅನಿವಾರ್ಯ. ಕೊರೊನಾ ಪಾಸಿಟಿವ್ ಆದ ಸಮಯದಲ್ಲಿ ನೀವೆಲ್ಲ ನನಗಾಗಿ ಪ್ರಾರ್ಥಿಸಿದ್ದೀರಿ. ಶುಭ ಹಾರೈಸಿದ್ದೀರಿ, ಬೇಗ ಗುಣಮುಖವಾಗುವಂತೆ ಶುಭ ಕೋರಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ.

sumalatha ambareesh

ಜೊತೆಗೆ ದೇವರ ಅನುಗ್ರಹ ಮತ್ತು ವೈದ್ಯರಾದ ಡಾ.ಸತೀಶ್ ಅವರ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತಂದವು, ಕೊರೊನಾ ಗೆದ್ದು ಬರುವಲ್ಲಿ ಸಹಕಾರಿ ಆದವು. ಆದಷ್ಟು ಬೇಗ ನಿಮ್ಮ ಸೇವೆಗೆ ನಾನು ಬರಲು ಎದುರು ನೋಡುತ್ತಿದ್ದೇನೆ. ನಿಮ್ಮ ಕಾಳಜಿ ಮತ್ತು ಹಾರೈಕೆಗೆ ನನ್ನ ಕೃತಜ್ಞತೆ ಪದ ಸಣ್ಣದಾಗಬಹುದು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸವನ್ನು ಯಾವತ್ತೂ ನಾನು ಮರೆಯಲಾರೆ.

ಕೋವಿಡ್ ಪಾಸಿಟಿವ್ ಆದ ಜನರು ಹೆದರಬೇಕಿಲ್ಲ. ದಯವಿಟ್ಟು ವೈದ್ಯರು ಹೇಳುವ ಎಲ್ಲ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿ, ಅನುಸರಿಸಿ. ಸದಾ ಸಕಾರಾತ್ಮಕವಾಗಿ ಯೋಚಿಸಿ. ಯಾವುದೇ ಕಾರಣಕ್ಕೂ ಅಧೈರ್ಯ ಪಡಬೇಡಿ. ಕೊರೊನಾ ಪಾಸಿಟಿವ್ ಅನ್ನು ನಿಮ್ಮ ಪಾಸಿಟಿವ್ ಆಲೋಚನೆಯ ಮೂಲಕ ಗೆಲ್ಲಿ. ಎಲ್ಲೇ ಇರಿ ಸೇಫ್ ಆಗಿರಿ ಎಂದು ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *