ಧಾರವಾಡ: ಪ್ರತಿ ವರ್ಷ ಶ್ರಾವಣ ಮಾಸದಂದು ಪುರಾಣ, ಪ್ರವಚನಗಳ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿದ್ದವು. ಆದರೆ ಕೊರೊನಾದಿಂದಾಗಿ ಶ್ರಾವಣ ಮಾಸದ ಗದ್ದಲವೇ ಇಲ್ಲದಂತಾಗಿದ್ದು, ಈ ಮೂಲಕ ಶ್ರಾವಣಮಾಸದ ವಿಶೇಷ ಪುರಾಣ ಕಾರ್ಯಕ್ರಮಗಳ ಮೇಲೂ ಕೊರೊನಾ ಕರಿ ನೆರಳು ಬಿದ್ದಿದೆ.
ಪ್ರತಿ ವರ್ಷ ಶ್ರಾವಣಮಾಸದ ತಿಂಗಳಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆ ಹಾಗೂ ಸಂಜೆ ಪುರಾಣ, ಪ್ರವಚನ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದೆ.
ಧಾರವಾಡ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಇದೀಗ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದ್ದು, ಹೀಗಾಗಿ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಧಾರವಾಡ ಜಿಲ್ಲಾಡಳಿತ ಸಹ ಈಗಾಗಲೇ ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶ ಹೊರಡಿಸಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣಮಾಸದ ಸಂದರ್ಭದಲ್ಲಿ ಹಾರೋಬೆಳವಡಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಅಲ್ಲದೆ ಅನೇಕ ವರ್ಷಗಳಿಂದ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಕಾರ್ಯ ಕೂಡ ಮಾಡಿಕೊಂಡು ಬರಲಾಗಿತ್ತು. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಅದೆಲ್ಲವನ್ನೂ ರದ್ದು ಮಾಡಲಾಗಿದೆ. ದೇವಸ್ಥಾನದ ಒಳಗೆ ಪ್ರವೇಶಿಸದಂತೆ ಭಕ್ತರಿಗೆ ನಿರ್ಬಂಧ ಸಹ ಹೇರಲಾಗಿದೆ.