ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡುವ ಅವಶ್ಯಕತೆ ಇಲ್ಲ: ಮಹಾ ಸರ್ಕಾರ

Public TV
2 Min Read
Sushant Singh Rajput 2

ಮುಂಬೈ: ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಗೃಹಮಂತ್ರಿ ಅನಿಲ್ ದೇಶ್‌ಮುಖ್‌ ಹೇಳಿದ್ದಾರೆ.

ಕಳೆದ ಜೂನ್ 14ರಂದು ಮುಂಬೈನಲ್ಲಿರುವ ತನ್ನ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು, ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಖಿನ್ನತೆ ಒಳಗಾಗಿ ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸುಶಾಂತ್ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಿನ್ನೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದರು.

anil deshmukh

ಈಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಗೃಹಮಂತ್ರಿ ಅನಿಲ್ ದೇಶ್‌ಮುಖ್‌ ಅವರು, ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣವನ್ನು ಮುಂಬೈ ಪೊಲೀಸರೇ ತನಿಖೆ ಮಾಡಲು ಸಮರ್ಥರಿದ್ದರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆಯಲ್ಲ. ನಮ್ಮ ಪೊಲೀಸರು ಕೂಡ ಈ ಪ್ರಕರಣವನ್ನು ಎಲ್ಲ ವಿಭಾಗದಿಂದ ತನಿಖೆ ಮಾಡುತ್ತಿದ್ದಾರೆ. ಸುಶಾಂತ್‍ಗೆ ಯಾರಾದರೂ ಚಿತ್ರರಂಗದಲ್ಲಿ ಶತ್ರುಗಳು ಇದ್ದಾರೆಯೇ ಎಂಬದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

SUSHANT

ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ, ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಬ್ರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಜೊತೆಗೆ ಸುಶಾಂತ್ ಸಿಂಗ್ ಅವರ ಕುಟುಂಬ ಸದಸ್ಯರು ಸೇರಿದಂತೆ ಎರಡು ಡಜನ್‍ಗೂ ಹೆಚ್ಚು ಜನರ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

sushanth 1

ಗುರುವಾರ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಿಯಾ, ಮಾನ್ಯ ಅಮಿತ್ ಶಾ ಅವರೇ, ನಾನು ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ. ಸುಶಾಂತ್ ನಿಧನವಾಗಿ ಒಂದು ತಿಂಗಳು ಕಳೆದಿದೆ. ನನಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ಸುಶಾಂತ್ ಯಾವ ಕಾರಣಕ್ಕಾಗಿ ಇಂತಹ ನಿರ್ಧರ ತೆಗೆದುಕೊಂಡ ಎಂಬ ವಿಷಯ ಬಹಿರಂಗವಾಗಬೇಕಿದೆ ಎಂದು ಬರೆದು ಟ್ವೀಟ್ ಮಾಡಿದ್ದರು.

Sushant Amit Shah

ಸುಶಾಂತ್ ಅವರು ‘ಶುದ್ಧ ದೇಸಿ ರೋಮ್ಯಾನ್ಸ್’, ‘ರಾಬ್ತಾ’, ‘ಕೇದಾರನಾಥ’ ಮತ್ತು ‘ಸೋಂಚಿರಿಯಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಯಲ್ಲಿ ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾ ಸುಶಾಂತ್‍ಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು. ಜೂನ್ 14ರಂದು ಸುಶಾಂತ್ ಶವ ಮನೆಯಲ್ಲಿ ಪತ್ತೆಯಾಗಿತ್ತು. ಜೂನ್ 14 ರಂದು ಬೆಳಗ್ಗೆ ಸುಮಾರು 9.30ಕ್ಕೆ ಜ್ಯೂಸ್ ಕುಡಿದು ಕೋಣೆ ಸೇರಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *