– ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳೋ ಸಮಯವಲ್ಲ
ಮೈಸೂರು: ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ 4 ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ 10 ಬಾರಿ ಪಕ್ಷಾಂತರ ಮಾಡಿದ್ದಾರೆ. ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆದರು. ಜೆಡಿಎಸ್, ಕಾಂಗ್ರೆಸ್‍ನಲ್ಲಿ ರಾಜಪ್ರಭುತ್ವ ನಡೆಯುತ್ತಿದೆ. ಮನೆಯವರೇ ರಾಷ್ಟ್ರಾಧ್ಯಕ್ಷ, ಮನೆಯವರೇ ರಾಜ್ಯಾಧ್ಯಕ್ಷ. ಎರಡು ಪಕ್ಷದ ರಾಜಪ್ರಭುತ್ವದ ವಿರುದ್ಧವೇ ನಾವು ಸಿಡಿದೆದ್ದಿದ್ದು. ಈಗ ಅದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಂದುವರಿದಿದೆ ಎಂದರು.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಸಿಎಂಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಲೆಕ್ಕ ಕೊಡಿ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ. ಹಾಸಿಗೆ ಇಲ್ಲ, ದಿಂಬಿಲ್ಲ ಎನ್ನುವುದನ್ನು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದು ಸಮಯವಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೆಚ್.ವಿಶ್ವನಾಥ್ ಟಾಂಗ್ ಕೊಟ್ಟರು.
ರಾಜಸ್ಥಾನ ಆತಂರಿಕ ಬಿಕ್ಕಟ್ಟು ಮತ್ತು ಸಂವಿಧಾನದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟದಲ್ಲಿ ಆಂತರಿಕ ಬಿಕ್ಕಟ್ಟು ಪ್ರಾರಂಭವಾಯಿತು. ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರು ಹೋಗುತ್ತಿಲ್ಲ. ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗುತ್ತಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಚಿನ್ ಪೈಲಟ್ ಆಡಳಿತ ಪಕ್ಷ ತೊರೆದು ಆಚೆ ಬಂದರು. ಈ ಮೂಲಕ ಆಡಳಿತ ಪಕ್ಷದಲ್ಲಿ ಅಸಮಾಧಾನ ದಂಗೆ ಹೇಳುತ್ತಿದೆ. ಇದನ್ನು ಪಕ್ಷಾಂತರ ಪಕ್ಷಾಂತರ ಎಂದು ಹೇಳುತ್ತಾರೆ. ಪಕ್ಷಾಂತರ ಪಾಪವಲ್ಲ ಎಂದರು.