ಕಾಂಗ್ರೆಸ್ಸಿನಲ್ಲಿ ಮಾತ್ರ ಸಚಿನ್ ಪೈಲಟ್‍ಗೆ ಉತ್ತಮ ಭವಿಷ್ಯವಿರೋದು: ವೀರಪ್ಪ ಮೊಯ್ಲಿ

Public TV
1 Min Read
SACHIN VEERAPPA

ಬೆಂಗಳೂರು: ರಾಜಸ್ಥಾನದ ರಾಜಕೀಯ ಹೈಡ್ರಾಮಾಕ್ಕೆ ಕಾರಣರಾಗಿರುವ ಸಚಿನ್ ಪೈಲಟ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಅಂತ ಇರುವುದು ಅದು ಕಾಂಗ್ರೆಸ್ಸಿನಲ್ಲಿ ಮಾತ್ರ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜಸ್ಥಾನದಲ್ಲಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲಿ ಇರುವಾಗಲೇ ಎಲ್ಲವನ್ನೂ ಸಾಧಿಸಿದ್ದಾರೆ. ಕಾಂಗ್ರೆಸ್‍ನಲ್ಲಿದ್ದುಕೊಂಡೇ ಸಂಸದ, ಕೇಂದ್ರ ಸಚಿವ, ರಾಜಸ್ಥಾನದ ಪಿಸಿಸಿ ಅಧ್ಯಕ್ಷ ಹಾಗೂ ರಾಜಸ್ಥಾನದ ಉಪಮುಖ್ಯಮಂತ್ರಿ ಕೂಡ ಆಗಿದ್ದರು. ಹೀಗಾಗಿ ಸಚಿನ್ ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪಕ್ಷದೊಳಗಡೆಯೇ ಮಾತುಕತೆ ನಡೆಸಿ ಪರಿಹರಿಸಬಹುದಾಗಿತ್ತು. ಅದಕ್ಕಾಗಿ ಇಷ್ಟೊಂದು ಆತುರ ಪಡುವ ಅವಶ್ಯಕತೆ ಇರಲಿಲ್ಲ ಎಂದರು.

ಸಚಿನ್ ಪೈಲಟ್ ಇಂದು ಏನು ಸಾಧಿಸಿದ್ದಾರೆಯೋ ಅದು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಅಲ್ಲದೆ ಮೊದಲು ಅದನ್ನು ಅವರು ಅರಿತುಕೊಳ್ಳಲಿ. ಅವರು ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರಲ್ಲ ಎಂದು ಹೇಳಿದ್ದಾರೆ. ಇದು ತುಂಬಾ ಒಳ್ಳೆಯ ನಿರ್ಧಾರವಾಗಿದೆ ಎಂದು ಮೊಯ್ಲಿ ತಿಳಿಸಿದರು.

ಸಚಿನ್ ಅವರಿಗೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಯಾಂಕದರೆ ಮಧ್ಯಪ್ರದೇಶ ಅಥವಾ ರಾಜಸ್ಥಾನದಲ್ಲಿ ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತದೆ. ಅಲ್ಲಿ ಚುನಾಯಿತ ಶಾಸಕರ ಬೆಂಬಲವನ್ನು ಪಡೆಯುವ ಮುಖಂಡನನ್ನು ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಅವರಿಗೆ ಸಿಎಂ ಆಗುವ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು.

ಕಳೆದ ಕೆಲ ದಿನಗಳಿಂದ ರಾಜಸ್ಥಾನದ ರಾಜಕೀಯದಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದ್ದು, ಜುಲೈ 14ರಂದು ಕಾಂಗ್ರೆಸ್ ಪಕ್ಷ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *