ಬೆಂಗಳೂರು: ಇಂದಿನಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ಆದರೆ ಕಂಟೈನ್‍ಮೆಂಟ್ ಮತ್ತು ಸೀಲ್‍ಡೌನ್ ಏರಿಯಾದಲ್ಲೇ ಜನರು ಓಡಾಡುತ್ತಿದ್ದಾರೆ.
ನಗರದ ಆನಂದ್‍ಪುರ ಸ್ಲಂ ಕ್ಲೋಸ್ ಮಾಡಲಾಗಿದೆ. ಈ ಏರಿಯಾದಲ್ಲಿ ಶೀಟ್ ಹಾಕಿದ್ದರೂ ಜನರು ಎಗ್ಗಿಲ್ಲದೇ ಓಡಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಆನಂದಪುರ ವಾಸಿಗಳು ಲಾಕ್‍ಡೌನ್ ಜಾರಿಯಾಗಿದ್ದರು ತರಕಾರಿ ಮಾರಾಟವನ್ನು ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಲಾಠಿ ರುಚಿ ತೋರಿಸಿದ ಮೇಲೆ ಜನರು ಓಡಿ ಹೋಗಿದ್ದಾರೆ.
ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದೆ. ಆದರೂ ಅನೇಕರು ಸುಮ್ಮನೆ ರಸ್ತೆಯಲ್ಲಿ ಒಡಾಡುತ್ತಿದ್ದಾರೆ. ಅಂತವರನ್ನು ತಡೆದು ಬುದ್ಧಿ ಹೇಳಿ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಬೆಳಗ್ಗೆಯಿಂದ ಹಾಲು, ತರಕಾರಿ, ದಿನಸಿ ಅಂಗಡಿಗಳನ್ನು ತೆರೆಯಲಾಗಿತ್ತು. ಇದೀಗ 12 ಗಂಟೆಯ ನಂತರ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಇತ್ತ ಕೆಂಪೇಗೌಡ ರಸ್ತೆಯಲ್ಲಿ ವಾಹನಗಳ ಓಡಾಟ ಜೋರಾಗಿದೆ. ಮಾಮೂಲಿ ದಿನಗಳಿಗಿಂತ ವಾಹನಗಳು ಕಡಿಮೆಯಿವೆ. ಆದರೂ ವಾಹನಗಳ ಓಡಾಟ ಮಾತ್ರ ಕಡಿಮೆಯಾಗಿಲ್ಲ.
ಇನ್ನೂ ಕೆ.ಆರ್. ಸರ್ಕಲ್‍ನಲ್ಲಿ ಮಾರ್ಗಸೂಚಿಗಳಲ್ಲಿ ಅನುಮತಿಯನ್ನು ಕೊಟ್ಟವರನ್ನ ಹೊರತುಪಡಿಸಿ ಬೇರೆಯವರು ಓಡಾಡುತ್ತಿದ್ದಾರೆ. ಅಂತಹವರ ವಾಹಗಳನ್ನು ಸೀಜ್ ಮಾಡುವ ಕೆಲಸ ಮಾಡಲಾಗುತ್ತಿದೆ. ಅನುಮತಿ ಕೊಟ್ಟಿರುವ ಕೆಲಸ ಕಾರ್ಯಗಳಿಗೆ ಜನ ಹೋಗುತ್ತಿದ್ದಾರೆ. ಹೀಗಾಗಿ ಕಡಿಮೆ ವಾಹನಗಳು ಓಡಾಟ ನಡೆಸುತ್ತಿವೆ.
ಮೈಸೂರು ರಸ್ತೆಯ ಸಿರ್ಸಿ ಸರ್ಕಲ್‍ನಲ್ಲಿ ವಾಹನಗಳ ಓಡಾಟ ಕಡಿಮೆಯಾದಂತೆ ಕಾಣುತ್ತಿಲ್ಲ, ಇದೇನು ಲಾಕ್ ಡೌನ್ ಅಥವಾ ಮಾಮೂಲಿ ದಿನವೋ. ಸಾಮಾನ್ಯ ದಿನಗಳಲ್ಲಿ ಓಡಾಡುವಂತೆ ವಾಹನಗಳು ಓಡಾಡುತ್ತಿವೆ. ಪೊಲೀಸರು ಅವರನ್ನು ತಡೆದು ತಪಾಸಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೂ ವಾಹನಗಳ ಓಡಾಟ ಕಡಿಮೆಯಾಗುತ್ತಿಲ್ಲ.