ಹಾಸನ: ಕೊರೊನಾ ಮಹಾಮಾರಿಗೆ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರು ಬಲಿಯಾಗಿದ್ದು, ಈ ಮೂಲಕ 20 ಜನ ಸಾವನ್ನಪ್ಪಿದಂತಾಗಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಹಾಸನ ನಗರದ 57 ವರುಷದ ಪುರುಷ ಹಾಗೂ ಆಲೂರು ತಾಲೂಕಿನ 45 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಹಾಸನ ನಗರದ 57 ವರ್ಷದ ಪುರುಷ ಜುಲೈ 5ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಜುಲೈ 10ರಂದು ಐಸಿಯು ನಲ್ಲಿ ಇರಿಸಿ, ವೆಂಟಿಲೇಟರ್ ಸೌಲಭ್ಯ ಒದಗಿಸಲಾಗಿತ್ತು. ಕಳೆದ ರಾತ್ರಿ 1.50ಕ್ಕೆ ಅವರು ಹೃದಯ ಸ್ತಂಭನದಿಂದ ಕೊನೆ ಉಸಿರೆಳೆದಿದ್ದಾರೆ.
ಅದೇ ರೀತಿ ಜುಲೈ 11ರಂದು ಸೋಂಕಿನಿಂದ ಕೊವಿಡ್-19 ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ಮಹಿಳೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 11.45ಕ್ಕೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ 32 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಇಂದು ಓರ್ವ ಬಿಎಂಟಿಸಿ ಡ್ರೈವರ್, ಐವರು ಹೆಲ್ತ್‍ಕೇರ್ ವರ್ಕರ್ ಸೇರಿ ಒಟ್ಟು 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 687 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 455 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 212 ಆಕ್ಟಿವ್ ಪ್ರಕರಣಗಳಿದ್ದು, ಈ ವರೆಗೆ 20 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.