ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಉಗ್ರರ ಮೇಲೆ ಗುಂಡಿನ ದಾಳಿ ಮಾಡಿದ್ದು, ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಂದು ನಡೆದ ಎನ್‍ಕೌಂಟರ್ ನಲ್ಲಿ ಭಾರತೀಯ ಭದ್ರತಾ ಪಡೆಗಳಿಂದ ಗುಂಡಿನ ದಾಳಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಈ ಇಬ್ಬರು ಉಗ್ರರಲ್ಲಿ ಓರ್ವ ಉಗ್ರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಸದಸ್ಯ ಎಂದು ಗುರುತಿಸಲಾಗಿದೆ.
ಸೇನೆಯಿಂದ ಹತ್ಯೆಗೀಡಾದ ಭಯೋತ್ಪಾದಕನನ್ನು ಕುಪ್ವಾರಾದ ನಟ್ನುಸಾ ನಿವಾಸಿಯಾಗಿದ್ದ ಇದ್ರೀಸ್ ಭಟ್ ಎಂದು ಗುರುತಿಸಲಾಗಿದೆ. ಈ ಉಗ್ರ 2018ರಲ್ಲಿ ವಾಗಾ ಬಾರ್ಡರ್ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲಿ ಉಗ್ರರ ಸಂಘಟನೆ ಸೇರಿ ತರಬೇತಿ ಪಡೆದು ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಹತ್ಯೆಯಾದ ಮತ್ತೋರ್ವ ಉಗ್ರಗಾಮಿಯ ಗುರುತು ಸಿಕ್ಕಿಲ್ಲ.
#UPDATE on encounter in Naugam sector, Baramulla: One of the two terrorists neutralised in the encounter today identified as Idris Bhat (in file pic) of Lashkar-e-Taiba; he went to Pakistan in 2018. The identity of the second terrorist is being ascertained. #JammuAndKashmir pic.twitter.com/wFSyNUH9bw
— ANI (@ANI) July 11, 2020
ಈ ಎನ್‍ಕೌಂಟರ್‍ಗೂ ಮುಂಚೆಯೇ ನೌಗಮ್ ಸೆಕ್ಟರ್ ನಲ್ಲಿ ಶೋಧ ಕಾರ್ಯಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಶ್ರೀನಗರ ಮೂಲದ ರಕ್ಷಣಾ ಪಿಆರ್‍ಓ ತಿಳಿಸಿದೆ. ಅಲ್ಲದೆ ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರಿಂದ ಭದ್ರತಾ ಸಿಬ್ಬಂದಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಬಾರಾಮುಲ್ಲಾ ವಿಭಾಗದ ಜನರಲ್ ಕಮಾಂಡಿಂಗ್ ಆಫೀಸರ್ ವೀರೇಂದ್ರ ವ್ಯಾಟ್ಸ್ ಅವರು, ನೌಗಂನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜೊತೆಗೆ ಅವರಿಂದ 1.5 ಲಕ್ಷ ಭಾರತೀಯ ಮತ್ತು ಪಾಕಿಸ್ತಾನಿ ಹಣವನ್ನು ವಶಕ್ಕೆ ಪಡೆದಿದ್ದೇವೆ. ಜೊತೆಗೆ ಎರಡು ಎಕೆ47 ಗನ್ ಮತ್ತು ಒಂದು ಪಿಸ್ತೂಲ್ ಸೇರಿದಂತೆ ಅಪಾರ ಪ್ರಮಾಣದ ಮದ್ದುಗುಂಡುಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.