ಮಡಿಕೇರಿ: ರಾಜ್ಯದಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಒಮ್ಮೆ ಅವರ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವ್ರೇ ಖುದ್ದಾಗಿ ಸಿಎಂ ಅವ್ರೇ ದಾಖಲೆ ಕೊಡ್ತಿದ್ದಾರೆ ಹೋಗಿ ಪರಿಶೀಲಿಸಿ: ಪ್ರತಾಪ್ ಸಿಂಹ
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್, ಅವರ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ಎಷ್ಟು ಅವ್ಯವಹಾರ ನಡೆಸಿದರು ಎನ್ನೋದು ಗೊತ್ತಿದೆ. ಮೊದಲು ಅದರ ಲೆಕ್ಕವನ್ನು ಕೊಡಲಿ. ಈಶ್ವರ ಕಂಡ್ರೆ ಅವರು ಮನೆ ನಿರ್ಮಿಸುವಾಗ ಎಷ್ಟು ಲೂಟಿ ಹೊಡೆದರು ಎನ್ನೋದು ಗೊತ್ತಿದೆ. ಅದೆಲ್ಲವನ್ನೂ ಮೊದಲು ರಾಜ್ಯದ ಜನತೆ ಮುಂದಿಡಲಿ. ಆ ಮೇಲೆ ರಾಜ್ಯ ಬಿಜೆಪಿ ಸರ್ಕಾರದ ಅವ್ಯವಹಾರದ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಅವ್ಯವಹಾರ ನಡೆದಿದ್ದರೆ ಅದರ ಬಗ್ಗೆ ದಾಖಲೆ ಕೊಡಿ ಎಂದು ಸಿಎಂ ಕೇಳಿ ಅವರನ್ನು ಒಂದು ಸಭೆಗೂ ಆಹ್ವಾನಿಸಿದರು. ಆದರೆ ಸಿದ್ದರಾಮಯ್ಯ ಮಾತ್ರ ಸಭೆಗೆ ಬರಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.