– ಮಧ್ಯರಾತ್ರಿ ಮತ್ತೊಮ್ಮೆ ಅಂತ್ಯಕ್ರಿಯೆ
ಶಿವಮೊಗ್ಗ: ನಗರದ ಕಸ್ತೂರು ಬಾ ರಸ್ತೆಯ 60 ವರ್ಷದ ವೃದ್ಧರೊಬ್ಬರು ಶುಕ್ರವಾರ ಮಧ್ಯಾಹ್ನ ಕೊರೊನಾ ಸೋಂಕಿಗೆ ಮೃತಪಟ್ಟಿದ್ದರು.
ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ರಾತ್ರಿ 8 ಗಂಟೆ ವೇಳೆಗೆ ರೋಟರಿ ಚಿತಾಗಾರಕ್ಕೆ ಶವವನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅಧಿಕಾರಿಗಳು ಹಾಗೂ ಮೃತ ವೃದ್ಧನ ಪುತ್ರ ಶವಕ್ಕೆ ಅಗ್ನಿ ಸ್ಪರ್ಶ ಮಾಡಿ, ಸಂಪೂರ್ಣ ಸುಟ್ಟು ಹೋಗುವವರೆಗೂ ಸ್ಥಳದಲ್ಲಿ ಇರದೇ ಅರ್ಧಕ್ಕೆ ಮನೆಯ ಕಡೆ ತೆರಳಿದ್ದರು.
ಅಗ್ನಿಸ್ಪರ್ಶ ಮಾಡಿದ ಕೆಲವೇ ಸಮಯದಲ್ಲಿ ಸೌದೆಗೆ ಹಚ್ಚಿದ್ದ ಬೆಂಕಿ ಹಾರಿ ಹೋಗಿದೆ. ಇದನ್ನು ದೂರದಿಂದಲೇ ಗಮನಿಸಿದ್ದ ಸ್ಥಳೀಯರು ಆತಂಕಗೊಂಡು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಪೋರೇಟರ್ ಯೋಗೀಶ್ ಸ್ಥಳೀಯರನ್ನು ಸಮಾಧಾನಪಡಿಸಲು ಯತ್ನಿಸಿದರು. ನಂತರ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮಧ್ಯರಾತ್ರಿ 1.30ರ ಸುಮಾರಿಗೆ ಮತ್ತೊಮ್ಮೆ ಶವಕ್ಕೆ ಅಗ್ನಿಸ್ಪರ್ಶ ನಡೆಸಿ ಶವವನ್ನು ಸಂಪೂರ್ಣ ಸುಟ್ಟು ಹಾಕಲಾಯಿತು. ಬಳಿಕ ಸಮಾಧಾನಗೊಂಡ ಸ್ಥಳೀಯರು ಮನೆ ಕಡೆ ತೆರಳಿದರು.
ಪಿಪಿಇ ಕಿಟ್ ಎಸೆದು ಹೋದ ಸಿಬ್ಬಂದಿ:
ಮಧ್ಯರಾತ್ರಿ ರೋಟರಿ ಚಿತಾಗಾರದಲ್ಲಿ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಆರೋಗ್ಯ ಸಿಬ್ಬಂದಿ ಸ್ಥಳದಲ್ಲಿಯೇ ಪಿಪಿಇ ಕಿಟ್ ಎಸೆದು ಹೋಗಿದ್ದಾರೆ. ಈ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ ಭದ್ರಾವತಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶವ ಸುಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆಗ್ರಹಿಸಿದ್ದಾರೆ. ಅಲ್ಲದೆ ರೋಟರಿ ಚಿತಾಗಾರದಲ್ಲಿ ಕೊರೊನಾ ಸೋಂಕಿತರ ಶವ ಸುಡಬಾರದೆಂದು ಕಿಡಿಕಾರಿದ್ದಾರೆ. ಕೊರೊನಾ ಸೋಂಕಿತನ ಶವ ಸುಟ್ಟು, ಮುಖ್ಯರಸ್ತೆಯಲ್ಲೇ ಪಿಪಿಇ ಕಿಟ್ ಬಿಟ್ಟು ಹೋಗಿರುವ ಸಿಬ್ಬಂದಿಯ ಅವಾಂತರ ಜಿಲ್ಲಾಡಳಿತಕ್ಕೆ ಮುಜುಗರ ಉಂಟುಮಾಡಿದೆ.