– ಪ್ರೀತಿಸಿದ ಹುಡುಗಿಯ ಕೈ ಹಿಡಿದ
– ಪೋಷಕರು ನೋಡಿದ ಯುವತಿಯನ್ನೂ ವರಿಸಿದ
ಭೋಪಾಲ್: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಯುವಕನೊಬ್ಬ ಒಂದೇ ಮಂಟಪದಲ್ಲಿ ಒಂದೇ ಸಮಯದಲ್ಲಿ ಇಬ್ಬರನ್ನು ವಿವಾಹವಾಗಿದ್ದಾನೆ.
ಮಧ್ಯಪ್ರದೇಶದ ಬೈತುಲ್ ಮೂಲದ ಸಂದೀಪ್ ಉಯಿಕೆ ಇಬ್ಬರು ಯುವತಿಯನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ಬೈತುಲ್ ಜಿಲ್ಲಾ ಕೇಂದ್ರ ಕಚೇರಿಯಿಂದ 40 ಕಿ.ಮೀ ದೂರದಲ್ಲಿರುವ ಘೋಡಡೋಂಗ್ರಿ ಬ್ಲಾಕ್‍ನ ಕೆರಿಯಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಅಲ್ಲದೇ ಮೂರು ಕುಟುಂಬಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಎಲ್ಲ ಸಂಪ್ರದಾಯಗಳೊಂದಿಗೆ ವಿವಾಹ ಸಮಾರಂಭ ನಡೆದಿದೆ.
ಸದ್ಯಕ್ಕೆ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯನ್ನು ವಿವಾಹವಾದ ಬಗ್ಗೆ ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ. ವಧುಗಳಲ್ಲಿ ಒಬ್ಬರು ಹೋಶಂಗಾಬಾದ್ ಜಿಲ್ಲೆಯವರಾಗಿದ್ದು, ಮತ್ತೊಬ್ಬ ವಧು ಘೋಡಡೋಂಗ್ರಿ ಬ್ಲಾಕ್‍ನ ಕೊಯಲಾರಿ ಗ್ರಾಮದವಳಾಗಿದ್ದಾಳೆ ಎಂದು ತಿಳಿದು ಬಂದಿದೆ.
ವರ ಸಂದೀಪ್ ಭೋಪಾಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಹೋಶಂಗಾಬಾದ್‍ನ ಯುವತಿಯ ಪರಿಯಚವಾಗಿತ್ತು. ಪರಿಯಚ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತ ಸಂದೀಪ್ ಕುಟುಂಬದವರು ಮಗನಿಗಾಗಿ ಹುಡುಗಿಯನ್ನು ಆಯ್ಕೆ ಮಾಡಿದ್ದರು. ಕೊನೆಗೆ ಈ ವಾದ ವಿಕೋಪಕ್ಕೆ ತಿರುಗಿ ಅದನ್ನು ಪರಿಹರಿಸಲು ಮೂರು ಕುಟುಂಬಗಳು ಪಂಚಾಯತಿ ಸೇರಿದವು. ಆಗ ಇಬ್ಬರು ಯುವತಿಯರು ಸಂದೀಪ್ ಜೊತೆ ಒಟ್ಟಿಗೆ ವಾಸಿಸಲು ಸಿದ್ಧರಾಗಿದ್ದರೆ ಮಾತ್ರ ಈ ವಿವಾಹವನ್ನು ನೇರವೇರಿಸಬಹುದು ಎಂದು ಪಂಚಾಯಿತಿ ತೀರ್ಮಾನಿಸಿದೆ.
ಆಗ ಇಬ್ಬರು ಯುವತಿಯರು ಕೂಡ ಸಂದೀಪ್‍ನನ್ನು ಮದುವೆಯಾಗಲು ಸಮ್ಮತಿ ಸೂಚಿದರು. ಹೀಗಾಗಿ ಸಂದೀಪ್ ಯುವತಿಯರ ಒಪ್ಪಿಗೆ ಮೇರೆಗೆ ಇಬ್ಬರನ್ನೂ ಮದುವೆಯಾಗಿದ್ದಾನೆ. ಕೆರಿಯಾ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಇಬ್ಬರು ವಧುವಿನ ಜೊತೆ ಸಂದೀಪ್ ಸಪ್ತಪದಿ ತುಳಿದಿದ್ದಾನೆ.
ಮೂರು ಕುಟುಂಬಗಳು ಮದುವೆಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಹೀಗಾಗಿ ಮೂವರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು ಎಂದು ಪಂಚಾಯಿತಿ ಉಪಾಧ್ಯಕ್ಷ ಮಿಶ್ರಿಲಾಲ್ ಪರಾಟೆ ಹೇಳಿದ್ದಾರೆ. ಮದುವೆಯಲ್ಲಿ ವರ, ಇಬ್ಬರು ವಧುವಿನ ಕುಟುಂಬ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.
ಕೊರೊನಾದಿಂದ ಮದುವೆ, ಸಮಾರಂಭ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಅವಶ್ಯಕ. ಆದರೆ ಈ ಮದುವೆಗೆ ಅನುಮತಿಯನ್ನು ಕೋರಿಲ್ಲ. ನಾವು ಮದುವೆಗೆ ಅನುಮತಿ ನೀಡಿಲ್ಲ. ಹೀಗಾಗಿ ಈ ಬಗ್ಗೆ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದಾರೆ ಎಂದು ಘೋಡಡೋಂಗ್ರಿ ತಹಶೀಲ್ದಾರ್ ಮೋನಿಕಾ ವಿಶ್ವಕರ್ಮ ಹೇಳಿದ್ದಾರೆ.