ಚಿಕ್ಕಮಗಳೂರು: ಓಡಾಡೋದಕ್ಕೆ ರಸ್ತೆ ಇಲ್ಲದೆ ಮೈದುಂಬಿ ಹರಿಯೋ ಹೇಮಾವತಿ ನದಿಯೊಳಗೆ ಸ್ಥಳೀಯರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನದಿ ದಾಟುವಂತಹಾ ದುಸ್ಸಾಹಸಕ್ಕೆ ಕೈಹಾಕತ್ತಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದ್ದ ಸೇತುವೆ ಕಳೆದ ಮಲೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.
ಸೇತುವೆ ಕೊಚ್ಚಿ ಹೋಗಿದ್ದ ವೇಳೆ ಶಾಸಕರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಜನನಾಯಕರು ಭರವಸೆ ಭರವಸೆಯಾಗೇ ಉಳಿದಿದೆ. ಸೇತುವೆಗೆ ತೀವ್ರ ಹಾನಿಯಾಗಿದ್ದರಿಂದ ಸ್ಥಳೀಯರೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಸುಂಕಸಾಲೆ, ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬಂಕೇನಹಳ್ಳಿಯಲ್ಲಿ ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ.
ಸೇತುವೆ ಕೂಡ ಕೊಚ್ಚಿ ಹೋಗಿದ್ದರಿಂದ ಈ ಭಾಗದ ಸುಮಾರು ನಾಲ್ಕೈದು ಹಳ್ಳಿಯ ಜನ ಬೇರೆ ದಾರಿ ಇಲ್ಲದೆ ಕಂಗಾಲಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಪಟ್ಟಣಕ್ಕೆ ಬರಬೇಕಾದರೆ ಗ್ರಾಮಸ್ಥರು ನೀರಿಗೆ ಇಳಿದು ನಡೆದೇ ದಡ ಸೇರಬೇಕಾಗಿದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ನೀರಿನ ಪ್ರಮಾಣ ಕೂಡ ಏರುತ್ತಲೇ ಇದೆ. ಸ್ಥಳೀಯರು ಅಗತ್ಯ ಹಾಗೂ ಅನಿವಾರ್ಯದ ಕೆಲಸಕ್ಕಾಗಿ ಜೀವದ ಹಂಗು ತೊರೆದು ಮಂಡಿ-ತೊಡೆ ಮಟ್ಟದ ನೀರಿಗಿಳಿದು ಅದರಲ್ಲಿ ಒಬ್ಬೊರ ಕೈ ಮತ್ತೊಬ್ಬರು ಹಿಡಿದು ನದಿ ದಾಟುತ್ತಿದ್ದಾರೆ.
ಜನಪ್ರತಿನಿಧಿಗಳು ಕೂಡಲೇ ನೆರವಿಗೆ ಬರಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ನಿರ್ಮಾಣ ಅಸಾಧ್ಯ ಹಾಗಾಗಿ, ಇಲ್ಲಿ ಅನಾಹುತವೊಂದು ಸಂಭವಿಸೋ ಮುನ್ನ ಜನಪ್ರತಿನಿಗಳು ಎಚ್ಚೆತ್ತುಕೊಂಡು ಸ್ಥಳೀಯರಿಗೆ ಓಡಾಡಲು ಬೇರೆ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.