-ಬ್ರೈನ್ ಡ್ಯಾಮೇಜ್ ಸಾಧ್ಯತೆ
ನವದೆಹಲಿ: ಜಾಗತಿಕ ಪಿಡುಗು ಕೊರೊನಾ ವಿಷಯದಲ್ಲಿ ದಿನದಿಂದ ದಿನಕ್ಕೆ ಆತಂಕಕಾರಿ ವಿಷಯಗಳು ಹೊರ ಬರುತ್ತಲೇ ಇವೆ. ಮೊನ್ನೆ ಮೊನ್ನೆ ಕೊರೊನಾ ಗಾಳಿಯ ಮುಖಾಂತರವೂ ಹರಡಲಿದೆ ಎಂಬ ಆತಂಕಕಾರಿ ಸುದ್ದಿ ಬಂದಿತ್ತು. ಈಗ ಕೊರೊನಾ ರೋಗಕ್ಕೆ ತುತ್ತಾದವರಿಗೆ ಇನ್ನೂ ಕೆಲವು ರೋಗಗಳು ಕೂಡ ಕಾಡಲಿವೆ ಎಂಬ ಭಯಾನಕ ಸುದ್ದಿ ಹೊರಬಿದ್ದಿದೆ.
ದೇಹ ಹೊಕ್ಕುವ ಕೊರೊನಾ ಕಾಯಿಲೆಗಳ ಸರಮಾಲೆಯನ್ನು ಸೃಷ್ಟಿ ಮಾಡಲಿದೆಯಂತೆ. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಮೆದುಳಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ಅದು ಬ್ರೈನ್ ಡ್ಯಾಮೇಜ್ ಮಾಡುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಇಂಗ್ಲೆಂಡಿನ ಲಂಡನ್ ಯೂನಿವರ್ಸಿಟಿ ಕಾಲೇಜ್ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂಶೋಧನೆಗಾಗಿ ಲಂಡನ್ ಯೂನಿವರ್ಸಿಟಿ ಕಾಲೇಜ್ ವಿಜ್ಞಾನಿಗಳು 43 ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು, ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ನರಗಳ ಸಮಸ್ಯೆ ಕೂಡಾ ಕಾಣಿಸಿಕೊಂಡಿದೆ. ಇದಲ್ಲದೇ ಸೋಂಕಿತ ವ್ಯಕ್ತಿ ಮನೋರೋಗಕ್ಕೂ ಒಳಗಾಗಬಹುದು, ಶ್ವಾಸಕೋಶದ ಸಮಸ್ಯೆಯಾಗಿ ಉಸಿರಾಟಕ್ಕೆ ತೊಂದರೆ ಅನುಭವಿಸಿ ಅವರಿಗೆ ಪಾಶ್ರ್ವವಾಯು ಆಗುವ ಸಂಭವ ಇದೆ ಎಂದು ವಿವರಿಸಿದ್ದಾರೆ.
ಇದಕ್ಕೂ ಮೊದಲು 32 ದೇಶಗಳ 239 ವಿಜ್ಞಾನಿಗಳ ಗುಂಪು ಸೈನ್ಸ್ ಜರ್ನಲ್ ಗಾಗಿ ಸಿದ್ಧಪಡಿಸಿದ ಸಂಶೋಧನಾ ವರದಿಯಲ್ಲಿ ಮಾರಕ ಕೊರೊನಾ ಸೋಂಕು ಗಾಳಿಯ ಮುಖಾಂತರವೂ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗಮನ ಹರಿಸಬೇಕು ಎಂದು ಪತ್ರ ಬರೆದಿದ್ದರು.
ಕೊರೊನಾ ಸೋಂಕು ಗಾಳಿಯಲ್ಲಿ ಹರಡುವ ವಿಷಯವನ್ನು ಮೊದಲು ನಿರಾಕರಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ ಈಗ ಒಪ್ಪಿಕೊಂಡಿದೆ. ಕೊರೊನಾ ಸೋಂಕು ಗಾಳಿಯಲ್ಲಿ ಹರಡುವ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಕೊರೊನಾ ಸಾಂಕ್ರಾಮಿಕ ರೋಗದ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ತಿಳಿಸಿದ್ದಾರೆ. ಹೀಗಾಗಿ ಗಾಳಿಯಲ್ಲಿ ಸೋಂಕು ಹಬ್ಬುವ ಸಾಧ್ಯತೆಗಳಿದ್ದು ಕೊರೊನಾ ಜೊತೆಗೆ ಮಾರಾಕ ಕಾಯಿಲೆಗಳು ದೇಹ ಸೇರುವ ಭೀತಿ ಸೃಷ್ಟಿಯಾಗಿದೆ.