ನವದೆಹಲಿ: ದೆಹಲಿಯ ಸ್ಥಳೀಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಕರು, ಸಿಬ್ಬಂದಿಯ ನಡುವೆ ದೈಹಿಕ ಸಂಪರ್ಕ ತಪ್ಪಿಸುವ ಹಿನ್ನೆಲೆಯಲ್ಲಿ ಇ-ಟಿಕೆಟ್ ವ್ಯವಸ್ಥೆ ಮಾಡಲು ತಿರ್ಮಾನಿಸಿದೆ. ಆರಂಭದಲ್ಲಿ ಇದು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಜಾರಿ ಬರಲಿದ್ದು ಬಳಿಕ ಪೂರ್ಣ ದೆಹಲಿಗೆ ವಿಸ್ತರಿಸುವ ಚಿಂತನೆ ಇದೆ.
ರೈಲ್ವೆ ಮತ್ತು ವಿಮಾನಗಳ ಟಿಕೆಟ್ ಬುಕ್ಕಿಂಗ್ ಮಾದರಿಯಲ್ಲೇ ಸ್ಥಳೀಯ ಬಸ್‍ಗಳ ಟಿಕೆಟ್ ಬುಕ್ಕಿಂಗ್ ಮಾಡಲು ತಂತ್ರಜ್ಞಾನ ರೂಪಿಸಿದ್ದು, ಇದರ ಹೊಣೆಯನ್ನು ರಾಜ್ಯ ಸರ್ಕಾರ ಇಂದ್ರಪ್ರಸ್ಥ ಇನ್‍ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ (ಐಐಐಟಿ)ಗೆ ವಹಿಸಿದೆ.
ಡಿಟಿಸಿ ಬಸ್‍ಗಳಲ್ಲಿ ಟಿಕೆಟ್ ಬಳಕೆಯಿಂದ ದೈಹಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಂತೆ ಮತ್ತು ಪೇಪರ್ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಐಐಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಶ್ ಬಿಯಾನಿ ಹೇಳಿದ್ದಾರೆ.
ಈ ಹಿನ್ನೆಲೆ ಇ-ಟಿಕೆಟ್ ವ್ಯವಸ್ಥೆ ಮಾಡಿದ್ದು ಪ್ರಯಾಣ ವಿವರಗಳನ್ನು ಮತ್ತು ಪ್ರಾಥಮಿಕ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ಭೀಮ್ ಯುಪಿಐ, ಪೇಟಿಎಂ, ಗೂಗಲ್-ಪೇ ಮುಂತಾದ ಡಿಜಿಟಲ್ ಪಾವತಿಯ ಮೂಲಕ ಮೊತ್ತವನ್ನು ಪಾವತಿಸಬೇಕು. ಇದು ಸಂಪೂರ್ಣ ಸಂಪರ್ಕವಿಲ್ಲದ ಪ್ರಕ್ರಿಯೆಯಾಗಿದ್ದು, ಇದರಿಂದ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಈಗಾಗಲೇ ಕಂಟೈನ್ಮೆಂಟ್ ಝೋನ್ ನಲ್ಲಿ ಸಂಚರಿಸುವ ಕೆಲವು ಬಸ್‍ಗಳಲ್ಲಿ ಪ್ರಯೋಗ ನಡೆಸಿದ್ದು ಮುಂದಿನ ದಿನಗಳಲ್ಲಿ ಹಾಟಸ್ಫಾಟ್‍ಗಳಲ್ಲಿ ವಿಸ್ತರಣೆಯಾಗಲಿದೆ. ಬಳಿಕ ಪೂರ್ಣ ದೆಹಲಿಗೆ ಈ ತಂತ್ರಜ್ಞಾನ ಪರಿಚಯಿಸಲು ತಿರ್ಮಾನಿಸಿದೆ.