ಚೀನಾದ ಅಣತಿಯಂತೆ ವರ್ತಿಸುತ್ತಿರುವ ಆರೋಪ- WHOದಿಂದ ಹೊರ ಬರಲು ಅಮೆರಿಕ ಸಿದ್ಧತೆ

Public TV
2 Min Read
donald trump

– ವಿಶ್ವ ಆರೋಗ್ಯ ಸಂಸ್ಥೆ ಚೀನಾದ ನಿಯಂತ್ರಣದಲ್ಲಿದೆ ಎಂದ ಟ್ರಂಪ್

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಚೀನಾದ ಅಣತಿಯಂತೆ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಅಮೆರಿಕ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಡಬ್ಲ್ಯೂಎಚ್‍ಒದಿಂದ ಹೊರಬರುವ ಅಧಿಕೃತ ಪ್ರಕ್ರಿಯೆಯನ್ನು ಆರಂಭಿಸಿದೆ.

ಅಮೆರಿಕಾ ತನ್ನ 2,993 ಕೋಟಿ ರೂ.(400 ಮಿಲಿಯನ್ ಡಾಲರ್) ನಿಧಿಯನ್ನು ವಾಪಸ್ ಪಡೆಯುವುದಾಗಿ ಡಬ್ಲ್ಯುಎಚ್‍ಒಗೆ ಹೇಳಿದ ಬೆನ್ನಲ್ಲೇ, ಇದೀಗ ಡಬ್ಲ್ಯುಎಚ್‍ಒದಿಂದ ಹೊರ ಬರುವ ಅಧಿಕೃತ ಪ್ರಕ್ರಿಯೆಯನ್ನು ಆರಂಭಿಸಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಡಬ್ಲ್ಯುಎಚ್‍ಒ ಚೀನಾದೊಂದಿಗೆ ಶಾಮಿಲಾಗಿದ್ದು, ಹೀಗಾಗಿಯೇ ಕೊರೊನಾ ವೈರಸ್‍ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸುವಲ್ಲಿ ತಡ ಮಾಡಿತು ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ ಟ್ರಂಪ್ ನೇತೃತ್ವದ ಸರ್ಕಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರಿಗೆ ಅಧಿಕೃತ ನೋಟಿಸ್ ಕಳುಹಿಸಿದೆ.

WHO on covid 19

ವಿಶ್ವಸಂಸ್ಥೆಯ ಮುಖ್ಯ ವಕ್ತಾರ ಹಾಗೂ ಡಬ್ಲ್ಯುಎಚ್‍ಒ ಈ ಕುರಿತು ಖಚಿತಪಡಿಸಿದ್ದು, ಜಿನಿವಾದ ಮುಖ್ಯ ಕಚೇರಿಗೆ ಅಮೆರಿಕ ನೋಟಿಸ್ ನೀಡಿದೆ. ಇನ್ನೊಂದು ವರ್ಷದಲ್ಲಿ ಅಂದರೆ 2021ರ ಜುಲೈ 6ರಿಂದ ಬಿಡುಗಡೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಅಮೆರಿಕ ಸರ್ಕಾರದ ಈ ನಿರ್ಧಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಕುರಿತು ಅಮೆರಿಕದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. 2020ರ ನವೆಂಬರ್ ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಡಬ್ಲ್ಯುಎಚ್‍ಒದಿಂದ ಹೊರ ಬರುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಅಲ್ಲಿನ ಡೆಮೊಕ್ರೆಟಿಕ್ ಪಕ್ಷ ಗುಡುಗಿದೆ.

DONALD TRUMP

ಜಾಗತಿಕ ಮಟ್ಟದಲ್ಲಿ ಆರೋಗ್ಯ ಬಲಪಡಿಸಲು ಅಮೆರಿಕ ತೊಡಗಿಕೊಂಡಾಗ ಅಮೆರಿಕನ್ನರು ಸುರಕ್ಷಿತವಾಗಿರುತ್ತಾರೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಮೊದಲ ದಿನವೇ ಡಬ್ಲ್ಯುಎಚ್‍ಒಗೆ ಅಮೆರಿಕವನ್ನು ಮತ್ತೆ ಸೇರ್ಪಡೆಗೊಳಿಸುತ್ತೇನೆ. ವಿಶ್ವ ಮಟ್ಟದಲ್ಲಿ ನಮ್ಮ ನಾಯಕತ್ವವನ್ನು ಮರು ಸ್ಥಾಪಿಸುತ್ತೇನೆ ಎಂದು ಅಮೆರಿಕ ವಿರೋಧ ಪಕ್ಷದ ನಾಯಕ ಬಿಡೇನ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಆರಂಭವಾದಾಗಿನಿಂದ ಡಬ್ಲ್ಯುಎಚ್‍ಒ ಹಾಗೂ ಅಮೆರಿಕದ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದು, ವಿಶ್ವ ಸಂಸ್ಥೆಯ ಅಂಗಸಂಸ್ಥೆ ಡಬ್ಲ್ಯುಎಚ್‍ಒ ಚೀನಾದೊಂದಿಗೆ ಶಾಮೀಲಾಗಿದೆ, ಒಳ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೊರೊನಾ ವೈರಸ್‍ನ್ನು ಸಾಂಕ್ರಾಮಿಕ ರೋಗ ಎಂದು ಘೊಷಿಸುವಲ್ಲಿ ಡಬ್ಲುಎಚ್‍ಒ ತಡ ಮಾಡಿತು ಎಂದು ಟ್ರಂಪ್ ಆರೋಪಿಸಿದ್ದರು. ಅಲ್ಲದೆ ಡಬ್ಲುಎಚ್‍ಒನಲ್ಲಿರುವ ಅಮೆರಿಕದ 400 ಮಿಲಿಯನ್ ಡಾಲರ್ ಹಣವನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕಿತ್ತು. ಈ ಹಣವನ್ನು ವಿಶ್ವಾದ್ಯಂತ ಹಾಗೂ ಅರ್ಹ, ತುರ್ತು, ಜಾಗತಿಕ ಸಾರ್ವಜನಿಕ ಆರೋಗ್ಯದ ಅಗತ್ಯತೆಗಳಿಗೆ ಬಳಸುವುದಾಗಿ ಹೇಳಿದ್ದರು.

china who

ವಿಶ್ವ ಆರೋಗ್ಯ ಸಂಸ್ಥೆಯನ್ನು ಚೀನಾ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು. ಆದರೆ ಡೆಮಾಕ್ರೆಟಿಕ್ ಪಕ್ಷದ ಸಂಸದರು ಟ್ರಂಪ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೊರೊನಾ ವೈರಸ್ ನಿಯಂತ್ರಿಸಲಾಗದೆ ಈ ರೀತಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *