ಬೆಂಗಳೂರು: ಆಧುನಿಕ ‘ಭಗೀರಥ’, ‘ಕೆರೆಗಳ ಮನುಷ್ಯ’ ಎಂದೇ ಖ್ಯಾತರಾಗಿರುವ ಕಾಮೇಗೌಡ ಅವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ, ‘ಜೀವಿತಾವಧಿಯವರೆಗೂ’ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಾಗಿದೆ.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಉಚಿತ ಬಸ್ ಪಾಸ್ ನೀಡಲಾಗಿದ್ದು, ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಪಾಸ್ ನೀಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ ಕಾಮೇಗೌಡ ಅವರು ಉಚಿತವಾಗಿ ಸಂಚರಿಸಬಹುದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಕೇಂದ್ರ ಕಛೇರಿ: ಬೆಂಗಳೂರು
ವಿಷಯ: ಕೆರೆಗಳ ಮನುಷ್ಯ ಶ್ರೀಯುತ ಕಾಮೇಗೌಡರಿಗೆ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ, ‘ಜೀವಿತಾವಧಿಯವರೆಗೂ’ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗಿದೆ.
— KSRTC (@KSRTC_Journeys) July 2, 2020
ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಅನನ್ಯ ಪರಿಸರ ಕಾಳಜಿಯನ್ನು ಮತ್ತು ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಕಾರ್ಯಕ್ರಮದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಡಿಯೋ ಕರೆ ಮಾಡಿ ಕಾಮೇಗೌಡರನ್ನು ಮಾತನಾಡಿದ್ದರು.
ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಕಾಮೇಗೌಡರು ಸಾಮಾಜಿಕ ಕಳಕಳಿಯನ್ನು ತೋರಿದ್ದರು. ಯಾವುದೇ ಆಕಾಂಕ್ಷೆ ಇಲ್ಲದೇ 16 ಕೆರೆಗಳನ್ನು ನಿರ್ಮಿಸಿದ್ದ ಕಾಮೇಗೌಡರು ಉಸಿತ ಬಸ್ ಪಾಸ್ ಮಾತ್ರ ಕೇಳಿದ್ದರು. ಬಸ್ ಪಾಸ್ ಸಿಕ್ಕರೇ ಅಕ್ಕಪಕ್ಕದ ಜಿಲ್ಲೆಗಳ ದೇವಾಲಯಗಳಿಗೆ ಭೇಟಿ ನೀಡಬಹುದು ಎಂಬುವುದು ಅವರ ಚಿಂತನೆಯಾಗಿತ್ತು. ಸದ್ಯ ಅವರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದ್ದು, ಈ ಕುರಿತ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕಾಮೇಗೌಡರ ಕೊಡುಗೆ ಅಪಾರ, ಅದ್ಭುತ ಹಾಗೂ ಅನುಕರಣೀಯವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ, ಅವರ ಜೀವತಾವಧಿಯವರೆಗೆ ಉಚಿತವಾಗಿ ಸಂಚರಿಸಲು ಬಸ್ ಪಾಸನ್ನು ನೀಡಲು ಅನುಮತಿಸಲಾಗಿದೆ ಎಂದು ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕ್ಯಾಮೆಗೌಡ ಅವರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿರುವ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸವನ್ನು ಗುರುತಿಸಿದ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕುರಿತು ಪ್ರಧಾನಿ ಮೋದಿ ಕ್ಯಾಮೇಗೌಡರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ದೇಶಕ್ಕೆ ಪರಿಚಯಿಸಿದ್ದರು.
ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ?:
ಕುರಿಗಾಹಿಯಾಗಿರುವ ಕ್ಯಾಮೇಗೌಡ ಅವರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಟಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿಪಡೆದಿದ್ದರು. ನಾನು ದಾಹ ತೀರಿಸಿಕೊಂಡೆ ಆದ್ರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.
ಕ್ಯಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕ್ಯಾಮೇಗೌಡರು ಸದ್ಯ 16 ಕೆರೆಗಳನ್ನು ನಿರ್ಮಿಸಿದ್ದರು.
ಕ್ಯಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಸಹ ಅವರು ತೋಡಿದ ಕೆರೆಗಳಲ್ಲಿ ನೀರು ಸಾಕಷ್ಟು ಇರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.