ಚಾಮರಾಜನಗರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದರೂ ಮೂರು ತಿಂಗಳ ಕಾಲ ಹಸಿರು ಝೋನ್ ನಲ್ಲಿದ್ದ ಏಕಮಾತ್ರ ಜಿಲ್ಲೆ ಚಾಮರಾಜನಗರ. ಆದರೆ ಇದೀಗ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಚಾಮರಾಜನಗರ ಎಪಿಎಂಸಿ ವ್ಯಾಪಾರಿಗಳು, ಗುಂಡ್ಲುಪೇಟೆ ಪಟ್ಟಣದ ವ್ಯಾಪಾರಿಗಳು ಸ್ವಯಂ ಲಾಕ್ಡೌನ್ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಸಹ ಹೆಚ್ಚೆತ್ತುಕೊಂಡಿದ್ದು, ಚಾಮರಾಜನಗರ ಜಿಲ್ಲಾದ್ಯಂತ ಸಂಜೆ 4ರ ನಂತರ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಆದೇಶದನ್ವಯ ಸಂಜೆ 4ರ ನಂತರ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿಸುವ ಕೆಲಸಕ್ಕೆ ಜಿಲ್ಲೆಯ ಪೊಲೀಸರು, ನಗರಸಭಾ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಮುಂದಾಗಿದ್ದಾರೆ.
ಬೆಳಗ್ಗೆ 7 ರಿಂದ ಸಂಜೆ 4ರ ವರೆಗೆ ವ್ಯಾಪಾರ ವಹಿವಾಟು ನಡೆಸಿ, ಸಂಜೆ 4 ರಿಂದ ಬೆಳಗ್ಗೆ 7 ರವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ಸೂಚಿಸಲಾಗಿದೆ. ಹಲವು ವ್ಯಾಪಾರಿಗಳು ತಾವೇ ಖುದ್ದು ಬಾಗಿಲು ಮುಚ್ಚುವ ಮೂಲಕ ಜಿಲ್ಲಾಡಳಿತದ ನಿರ್ಧಾರಕ್ಕೆ ಸ್ವಾಗತ ಕೋರಿದ್ದಾರೆ. ಇದಲ್ಲದೆ ಮತ್ತೆ ಅಂತರ್ಜಿಲ್ಲಾ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಡಿಸಿ ರವಿ ಮನಸ್ಸು ಮಾಡಿದ್ದು, ಈ ಮೂಲಕ ಕೊರೊನಾವನ್ನು ಜಿಲ್ಲೆಯಿಂದ ಹೊಡೆದೊಡಿಸಿ, ಮತ್ತೆ ಹಸಿರು ಜಿಲ್ಲೆಯಾಗಿ ಮಾಡಲು ಪಣ ತೊಟ್ಟಿದ್ದಾರೆ.