– ಆಗಸ್ಟ್‌ನಲ್ಲಿ SSLC, ಜುಲೈನಲ್ಲಿ PUC ಫಲಿತಾಂಶ
– ಆನ್‍ಲೈನ್ ಶಿಕ್ಷಣಕ್ಕೆ ಕೇಂದ್ರ ಸರ್ಕಾರದ ಗೈಡ್ ಲೈನ್ಸ್
ಚಿಕ್ಕಬಳ್ಳಾಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರೋ ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಸುರಕ್ಷತೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ನಾನು ಪರೀಕ್ಷಾ ಕೇಂದ್ರಗಳಿಗೆ ಭೇಟಿ ಮಾಡುತ್ತಿದ್ದೇನೆ. ಇದು ಪರೀಕ್ಷಾ ಕೇಂದ್ರ ಆಗಬಾರದು ಮಕ್ಕಳಿಗೆ ಸುರಕ್ಷಾ ಕೇಂದ್ರ ಆಗಿರಬೇಕು ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಅಗಲಗುರ್ಕಿ ಗ್ರಾಮದ ಬಿಜಿಎಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಸುರೇಶ್ ಕುಮಾರ್, ಇಂಗ್ಲೀಷ್ ಹಾಗೂ ಗಣಿತ ಪರೀಕ್ಷೆ ದಿನ ಸರಾಸರಿ ಶೇ.98 ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ಇದು 98.68 ಆಗಿತ್ತು. ಹೀಗಾಗಿ ಇದು ಸಹ ಉತ್ತಮ ನಡೆ. ಶಾಲೆಗೆ ಬಂದು ವ್ಯಾಸಂಗ ಮಾಡಿರೋ ಮಕ್ಕಳು ಗೈರಾಗುತ್ತಿಲ್ಲ. ಕೆಲ ಮಕ್ಕಳ ಗೈರಾಗಿದ್ದಕ್ಕೆ ಸ್ವತಃ ನಮ್ಮ ಅಧಿಕಾರಿಗಳು ಪೋಷಕರನ್ನ ಸಂಪರ್ಕಿಸಿ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಹೀಗಾಗಿ ಅಂತಹ ಮಕ್ಕಳು ಮತ್ತೆ ಬಂದು ಪರೀಕ್ಷೆ ಎದುರಿಸಿದ್ದಾರೆ ಎಂದರು.
ಖಾಸಗಿ ಶಾಲೆಗಳಿಗೆ ವಾರ್ನಿಂಗ್
ಈ ವರ್ಷ ಕೊರೊನಾ ಇರುವುದರಿಂದ ಯಾವುದೇ ಖಾಸಗಿ ಶಾಲೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಅಂತ ಸುರೇಶ್ ಕುಮಾರ್ ಹೇಳಿದರು. ಈ ಒಂದು ವರ್ಷ ವಿಶೇಷವಾದ, ವಿಚಿತ್ರವಾದ ವರ್ಷ, ಕೊರೊನಾದಿಂದ ಎಲ್ಲರೂ ಸಮಸ್ಯೆಗಳಿಗೆ ಸಿಲುಕಿದ್ದು, ಮಾನವೀಯತೆ ದೃಷ್ಠಿಯಿಂದಲೂ ಸಹ ಯಾರೂ ಶುಲ್ಕ ಹೆಚ್ಚಳ ಮಾಡಬಾರದು. ಯಾವುದೇ ಶಾಲೆ ಶುಲ್ಕ ಹೆಚ್ಚಳ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀವಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸರಿ ಸುಮಾರು 1150 ಶಾಲೆಗಳ ಬಗ್ಗೆ ನಮಗೆ ದೂರು ಬಂದಿದ್ದು ಅದರಲ್ಲಿ 450 ಶಾಲೆಗಳ ವಿರುದ್ದ ಕ್ರಮ ಕೈಗೊಂಡಿದ್ದು, ಅವರು ಸಹ ಶುಲ್ಕವನ್ನ ಇಳಿಸಿದ್ದಾರೆ. ಉಳಿದ ಶಾಲೆಗಳ ಮೇಲೂ ಕ್ರಮ ಜರುಗುತ್ತಿದೆ ಎಂದರು.
ಆಗಸ್ಟ್‌ನಲ್ಲಿ SSLC, ಜುಲೈನಲ್ಲಿ PUC ಫಲಿತಾಂಶ:
ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಹಾಗೂ ಜುಲೈ ಕೊನೆ ವಾರದಲ್ಲಿ ಪಿಯುಸಿ ಪರೀಕ್ಷಾ ಫಲಿತಾಂಶ ನೀಡಲು ಬಹುತೇಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. ಬಹುತೇಕ ಪ್ರಾಥಮಿಕ ಶಾಲೆಯ ಮಕ್ಕಳ ಪೋಷಕರಿಗೆ ಮಕ್ಕಳನ್ನ ಶಾಲೆಗಳಿಗೆ ಕಳುಹಿಸುವ ಮನಸ್ಥಿತಿಯಲ್ಲಿ. ಶಾಲೆಗಳನ್ನು ಯಾವಾಗಿನಿಂದ ಪ್ರಾರಂಭ ಮಾಡಬೇಕು ಅನ್ನೋದೆ ಪ್ರಶ್ನೆಯಾಗಿದೆ. ಹಲವರು ಆಗಸ್ಟ್ ಹಾಗೂ ಸೆಪ್ಟೆಂಬರಿನಲ್ಲಿ ಮಾಡಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೀವಿ ಎಂದರು.
ಆನ್‍ಲೈನ್ ಶಿಕ್ಷಣ.
ಆನ್‍ಲೈನ್ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಇದ್ದು, ಅದರಲ್ಲೂ ಎಲ್‍ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಮಾಡಬಾರದು ಅಂತ ನಿಯಮವಿದೆ. ಬೇಕಾದರೇ ಮಕ್ಕಳ ಪಾಲಕರ ಜೊತೆ ವಾರಕ್ಕೆ ಎರಡು ಬಾರಿ ಮಾತನಾಡಬಹುದು. ಮಕ್ಕಳನ್ನ ಹೇಗೆ ನೋಡಿಕೊಳ್ಳಬೇಕು ಅಂತ ಶಿಕ್ಷಣ ಕೊಡಬಹುದು. 1 ರಿಂದ 6 ಹಾಗೂ 06 ರಿಂದ 10 ನೇ ತರಗತಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಕೊಡಬಹುದು ಅಂತ ಕೇಂದ್ರದ ಗೈಡ್ ಲೈನ್ ಬಂದಿದೆ. ಅದಕ್ಕೆ ನಾವು ಒಂದಷ್ಟು ಬದಲಾವಣೆ ಮಾಡಿ ತಜ್ಞರ ಸಮಿತಿ ರಚಿಸಿದ್ದೀವಿ. ಅವರ ವರದಿ ಬಂದ ನಂತರ ಅಂತಿಯ ರೂಪು ರೇಷೆ ಸಿದ್ಧ ಮಾಡುತ್ತೀವಿ ಎಂದು ತಿಳಿಸಿದರು.