ವಿಜಯಪುರ: ಕಾಡಿನಿಂದ ನಾಡಿಗೆ ಬಂದು ನಾಯಿಗಳ ಪಾಲಾಗುತ್ತಿದ್ದ ಜಿಂಕೆಯನ್ನು ರೈತ ಹಾಗೂ ಯುವಕರು ಸೇರಿ ರಕ್ಷಣೆ ಮಾಡಿದ್ದಾರೆ.
ವಿಜಯಪುರ ನಗರದ ಹೊರವಲಯದ ಟೋಲ್ ನಾಕಾ ಬಳಿಯ ಹೌಸಿಂಗ್ ಬೋರ್ಡ್ ಬಳಿ ಜಿಂಕೆಯನ್ನು ರಕ್ಷಿಸಲಾಗಿದೆ. ಅಲಿಯಾಬಾದ ಬಳಿಯ ಬಂಡು ತಾಂಡೆ ನಿವಾಸಿ ರೈತ ಅಬುಶಾ ಬಾಳು ಮಾನೆಯವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ರೈತ ತನ್ನ ಹೊಲಕ್ಕೆ ಹೊರಟಾಗ ಹತ್ತಾರು ನಾಯಿಗಳನ್ನು ಕಂಡು ಗಾಬರಿಗೊಳಗಾದರು. ಹೀಗಾಗಿ ಅವುಗಳ ಬಳಿ ಹೋಗಿ ನೋಡಿದಾಗ ನಾಯಿಗಳು ಜಿಂಕೆಯನ್ನು ಎಳೆದಾಡುತ್ತಿದ್ದವು. ಕೂಡಲೇ ಅಲ್ಲಿದ್ದ ನಾಯಿಗಳನ್ನು ಓಡಿಸಲು ರೈತ ಹೆಣಗಾಡಿದ್ದಾರೆ. ಕೊನೆಗೂ ಶ್ವಾನಗಳನ್ನು ಓಡಿಸಿ ರೈತ ಜಿಂಕೆಯನ್ನು ನಾಯಿಗಳಿಂದ ಬಚಾವ್ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಯುವಕರ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ರೈತ ಜಿಂಕೆಯನ್ನು ಹಸ್ತಾಂತರ ಮಾಡಿದ್ದಾರೆ. ರೈತ, ಯುವಕರ ಕಾರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.