– ಸ್ನೇಹಿತರೊಂದಿಗೆ ಆಟವಾಡಿದ್ದಾನೆ ಬಾಲಕ
ಮಡಿಕೇರಿ: ಒಂದು ತಿಂಗಳಿಂದ ಕೊಡಗಿನತ್ತ ಸುಳಿಯದ ಕೊರೊನಾ ಮಹಾಮಾರಿ ಎರಡು ದಿನಗಳಿಂದ ಕೇಕೆ ಹಾಕುತ್ತಿದೆ. ಸೋಮವಾರವಷ್ಟೇ ಮೂರು ಪ್ರಕರಣಗಳು ದಾಖಲಾಗಿದ್ದು, ಇಂದು ಮತ್ತೆ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಶಿರಂಗಾಲ ಗ್ರಾಮದ ಪಾಸಿಟಿವ್ ವ್ಯಕ್ತಿಯ ಇಬ್ಬರು ಮಕ್ಕಳಿಗೆ ಅಂದರೆ 14 ಬಾಲಕ ಮತ್ತು 17 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್ ಆಗಿದೆ. ಬಾಲಕಿ ಮತ್ತು ಬಾಲಕ ಇಬ್ಬರೂ ಬಹುತೇಕ ತಂದೆಯೊಂದಿಗೆ ಓಡಾಡಿದ್ದರಿಂದ ಪಾಸಿಟಿವ್ ಬಂದಿದೆ. ಬಾಲಕಿಯೊಂದಿಗೆ ಯಾರ ಸಂಪರ್ಕವೂ ಬಂದಿಲ್ಲ. ಆದರೆ ಬಾಲಕ ಶನಿವಾರಸಂತೆಯ ಗುಂಡುರಾವ್ ಬಡಾವಣೆಯಲ್ಲಿ ಇತರ ಬಾಲಕರೊಂದಿಗೆ ಆಟವಾಡಿದ್ದಾನೆ.
ಬಾಲಕನೊಂದಿಗೆ ಸಂಪರ್ಕಕ್ಕೆ ಬಂದಿರುವವರ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ. ಕೊಡಗಿನಲ್ಲಿ ಕಳೆದ ಎರಡು ದಿನಗಳಲ್ಲಿ ಐದು ಪ್ರಕರಣಗಳಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8ಕ್ಕೆ ಏರಿದೆ. ಇದರಲ್ಲಿ ಮೂವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.