ಮುಂಬೈ: ಬಾಲಿವುಡ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಚರ್ಚೆಯಿಂದಾಗಿ ಸಿನಿಮಾ ರಂಗವೇ ಇಬ್ಭಾಗವಾಗಿದೆ. ಹಲವರು ಸ್ವಜನ ಪಕ್ಷಪಾತದ ಪರ ನಿಂತರೆ, ಇನ್ನೂ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಒಬ್ಬ ನಟನ ಆತ್ಮಹತ್ಯೆ ಸುತ್ತ ಹಲವು ಅನುಮಾನಗಳ ಹುತ್ತವೇ ಎದ್ದಿದ್ದು, ನಟ, ನಟಿಯರು ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ. ಇದೆಲ್ಲದರ ಮಧ್ಯೆ ಖುಷಿ ವಿಚಾರವೆಂದರೆ ಸುಶಾಂತ್ ಸಿಂಗ್ ರಜಪೂತ್ ಕುರಿತು ಸಿನಿಮಾ ತಯಾರಾಗುತ್ತಿದೆ. ಬಾಲಿವುಡ್‍ನಲ್ಲಿ ಇಂತಹದ್ದೊಂದು ಪ್ರಯತ್ನ ನಡೆಯುತ್ತಿದ್ದು, ಚಿತ್ರ ನಿರ್ಮಾಣಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಶಾಂತ್ ಅನುಭವಿಸಿದ ಮಾನಸಿಕ ಹಿಂಸೆ, ನೋವು, ತೊಳಲಾಟ, ಅವಮಾನ ಹಾಗೂ ಸಾಧನೆ ಎಲ್ಲವನ್ನೂ ಸೇರಿಸಿ ಸಿನಿಮಾ ಮಾಡಲಾಗುತ್ತಿದೆ.
ಈಗಾಗಲೇ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಇನ್ನೇನು ಚಿತ್ರ ಸೆಟ್ಟೇರುವುದು ಬಾಕಿ ಇದೆ. ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಹುಡುಗ ರ್ಯಾಂಕ್ ಸ್ಟುಡೆಂಟ್, ಕನಸುಗಳ ಬೆನ್ನು ಹತ್ತಿ ಕಾಲೇಜು ಬಿಟ್ಟು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ. ಆರಂಭದಲ್ಲಿ ಹೀರೋಗಳ ಹಿಂದೆ ಡ್ಯಾನ್ಸ್ ಮಾಡುತ್ತಿದ್ದ ಹುಡುಗ ಸುಶಾಂತ್, ನಂತರ ಏರಿದ ಎತ್ತರ ಸಾಮಾನ್ಯವಾದುದಲ್ಲ. ಹೀಗಾಗಿ ಸುಶಾಂತ್ ಸುಖ, ದುಃಖ, ಸಾಧನೆ ಕುರಿತು ಸಿನಿಮಾ ಮಾಡಲಾಗುತ್ತಿದೆ.
ಚಿತ್ರದ ಹೆಸರನ್ನು ಸಹ ಅಷ್ಟೇ ನಾಜೂಕಾಗಿ ಆಯ್ಕೆ ಮಾಡಲಾಗಿದ್ದು, ‘ಸ್ಯೂಸೈಡ್ ಆರ್ ಮರ್ಡರ್’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಸಿನಿಮಾವನ್ನು ವಿಎಸ್‍ಜಿ ಬಿಂಗೆ ಸಂಸ್ಥೆ ನಿರ್ಮಿಸುತ್ತಿದ್ದು, ಪೋಸ್ಟರ್ ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಬಿಡುಗಡೆ ಮಾಡಲಾಗಿದೆ.
ಇದು ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರವಲ್ಲ. ಆದರೆ ಸುಶಾಂತ್ ಸಿಂಗ್ ಬದುಕಿನಿಂದ ಪ್ರೇರಣೆಗೊಂಡು ಕಥೆ ಸಿದ್ಧಪಡಿಸಲಾಗುತ್ತದೆ. ಅಲ್ಲದೆ ಸಿನಿಮಾದಲ್ಲಿ ಯಾವುದೇ ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದಿಲ್ಲ. ಸಿನಿಮಾ ನಾಯಕನನ್ನು ಸಹ ಹೊಸಬರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ನಿರ್ದೇಶಕ ಶಾಮಿಕ್ ಮಾಹಿತಿ ನೀಡಿದ್ದಾರೆ.
ಜೂನ್ 14ರಂದು ಸುಶಾಂತ್ ನಿಧನರಾಗಿದ್ದು, ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಿದ್ದಾರೆ. ಸುಶಾಂತ್ ಸ್ನೇಹಿತರು ಈ ಕುರಿತು ಮಾಹಿತಿ ನೀಡಿದ್ದು, ಸುಶಾಂತ್‍ಗೆ ವಿವಾಹವಾಗುವುದು ಇಷ್ಟವಿರಲಿಲ್ಲ. ತಂದೆಯ ಒತ್ತಾಯದ ಮೇರೆಗೆ ವಿವಾಹವಾಗಲು ಒಪ್ಪಿಕೊಂಡಿದ್ದರು. ಲಾಕ್‍ಡೌನ್ ವೇಳೆ ಭಾವಿ ಪತ್ನಿಯ ಮನೆಯಲ್ಲೇ ಇದ್ದ ಸುಶಾಂತ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ.