ಕೋಲಾರ: ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೂ ಅಂತಾರೆ. ಆದರೆ ಇಲ್ಲೊಂದು ಸಂಸಾರದ ಜಗಳ ಊಟದಿಂದ ಶುರುವಾಗಿ ವರ್ಷಗಳೇ ಕಳೆದರೂ ಬಗೆಹರಿಯುತ್ತಿಲ್ಲ. ಹೆಂಡತಿಯೊಂದು ಹೇಳಿದ್ರೆ ಗಂಡ ಮತ್ತೊಂದು ಹೇಳಿಕೊಂಡು ಇಬ್ಬರ ಸಂಸಾರ ಈಗ ಬೀದಿ ರಾಮಾಯಣವಾಗಿ ಪರಿಣಮಿಸಿದೆ.
ಹೌದು. ಕಳೆದ ಮೂರು ವರ್ಷಗಳ ಹಿಂದೆ ಕೋಲಾರ ತಾಲೂಕು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಟ್ಟಹಳ್ಳಿ ಗ್ರಾಮದ ಚೇತನ್ ಎಂಬಾತನಿಗೂ ಬಂಗಾರಪೇಟೆ ತಾಲೂಕು ಯಲಬುರ್ಗಿ ಗ್ರಾಮದ ಮಾಲಾ ಎಂಬಾಕೆಗೂ ಮದುವೆ ಮಾಡಲಾಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಇಬ್ಬರ ನಡುವೆ ವಿರಸ ಆರಂಭವಾಗಿತ್ತು, ಈಕೆ ಹೇಳುವಂತೆ ಊಟ ಸರಿ ಇಲ್ಲ ಎಂದು ಆರಂಭವಾದ ಜಗಳ ಇಂದು ಇಬ್ಬರೂ ವಿಚ್ಛೇದನ ಪಡೆಯುವ ಮಟ್ಟಿಗೆ ಹೋಗಿದೆ.
ಇಬ್ಬರ ನಡುವಿನ ಜಗಳ ಸರಿಪಡಿಸಲು ಮನೆಯ ಹಿರಿಯರು ಎರಡು-ಮೂರು ಪಂಚಾಯ್ತಿಗಳನ್ನು ಮಾಡಿದ್ರು. ಇದರ ಮಧ್ಯದಲ್ಲೇ ಒಂದು ಗಂಡು ಮಗು ಕೂಡ ಹುಟ್ಟಿದೆ. ಆದರೂ ಇವರಿಬ್ಬರ ಜಗಳ ಮಾತ್ರ ಬಗೆಹರಿದಿಲ್ಲ. ಜಗಳ ವಿಕೋಪಕ್ಕೆ ಹೋಗಿ ಜಗಳ ಸದ್ಯ ನ್ಯಾಯಾಲಯದ ಮೆಟ್ಟಿಲೇರಿ, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಬುಧವಾರ ಮಾಲಾ ತನ್ನ ಗಂಡ ಬೇರೆ ಮದುವೆಯಾಗುತ್ತಾನಂತೆ ಎಂಬ ಸುದ್ದಿ ತಿಳಿದು ತನ್ನ ಗಂಡನ ಮನೆಗೆ ಬಂದಿದ್ದಾಳೆ. ಈ ವೇಳೆ ಮನೆಗೆ ಸೇರಿಸದ ಗಂಡನ ಮನೆಯವರು, ಮಾಲಾಳನ್ನು ಹೊರ ಹಾಕಿದ್ದಾರೆ. ನಮ್ಮ ಮೇಲೆ ಕೇಸ್ ಹಾಕಿದ್ಯಾ ಅಲ್ಲಿ ಇತ್ಯಾರ್ಥವಾಗುವವರೆಗೂ ಮನೆಗೆ ಬರಬೇಡ ಎಂದು ಹೊರದಬ್ಬಿದ್ದಾರೆ ಎಂದು ಮಾಲಾ ಆರೋಪಿಸುತ್ತಿದ್ದಾಳೆ. ಅಲ್ಲದೆ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗೋದು ಅನುಮಾನ ನನಗೆ ಇಲ್ಲಿ ವಾಸಮಾಡೋದಕ್ಕೆ ಅವಕಾಶ ಮಾಡಿಕೊಡಿ ಎಂದು ತನ್ನ ಗಂಡನ ಮನೆ ಎದುರು ನಿನ್ನೆಯಿಂದ ತನ್ನ ಮಗುವಿನೊಂದಿಗೆ ಪಟ್ಟುಹಿಡಿದು ಕುಳಿತಿದ್ದಾಳೆ.
ಇಬ್ಬರ ನಡುವೆ ಹಲವಾರು ಬಾರಿ ನ್ಯಾಯ ಪಂಚಾಯ್ತಿಗಳಾಗಿ ಸಮಸ್ಯೆ ಬಗೆಹರಿಯದ ಹಿನ್ನೆಲೆ ಮಾಲಾ ತನ್ನ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಗಂಡನಿಂದ ಜೀವನಾಂಶ ಕೊಡಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಇಬ್ಬರ ವಿವಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ವಿವಾದ ಬಗೆಹರಿಯುವ ಮೊದಲೇ ಮಾಲಾ ತನ್ನ ಮನೆ ಬಳಿ ಬಂದಿರೋದು ನನ್ನ ತೇಜೋವಧೆ ಮಾಡಿ ನನ್ನ ಮಾನ ಮರ್ಯಾದೆ ಹರಾಜು ಹಾಕಲು ಬಂದಿದ್ದಾಳೆ ಎಂದು ಆರೋಪಿಸಿರುವ ಪತಿ ಚೇತನ್, ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತಿದ್ದೇನೆ ಅನ್ನೋದು ಸುಳ್ಳು ಸುದ್ದಿ. ಆಕೆ ನಾನು ಹೇಳಿದ್ದೇ ನಡೆಯಬೇಕೆಂಬ ಹಠಕ್ಕೆ ಬಿದ್ದು ಇಂದು ನಮ್ಮ ಸಂಸಾರ ಈ ಪರಿಸ್ಥಿತಿ ಬಂದಿದೆ. ಅವರ ಕುಟುಂಬದವರಿಂದ ನನಗೆ ಜೀವ ಬೆದರಿಕೆ ಇರುವ ಕಾರಣ ನಾನು ಅವರನ್ನು ಮನೆಯಿಂದ ಹೊರ ಹಾಕಿ ನಾವು ಅಲ್ಲಿಂದ ಬಂದಿದ್ದೇವೆ ಎಂದು ಹೇಳುತ್ತಿದ್ದಾನೆ.
ಒಟ್ಟಿನಲ್ಲಿ ನಮ್ಮ ಸಂಸಾರ ಆನಂದ ಸಾಗರ ಅಂತ ಆನಂದವಾಗಿರಿ ಎಂದು ಹೊಂದಾಣಿಕೆಯಿಂದ ಹೊಂದಿಕೊಂಡು ಹೋಗಬೇಕಿದ್ದ ಸಂಸಾರ ಇಂದು ಬೀದಿ ರಂಪಾಟವಾಗಿದೆ. ಅತ್ತ ಸಮಸ್ಯೆ ಬಗೆಹರಿಯದಷ್ಟು ಹರಿದು ಹಂಚಿಹೋಗಿದೆ, ಇಷ್ಟಾದ್ರು ಬುದ್ಧಿ ಕಲಿಯದ ಇವರಿಬ್ಬರು ಹಠ ಸಾಧಿಸಿಕೊಂಡು ಡ್ರಾಮ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ.