ಮಡಿಕೇರಿಯಲ್ಲಿ ಭೂ ಕುಸಿತದ ಆತಂಕ- ರಾತ್ರೋರಾತ್ರಿ ಕುಟುಂಬಗಳು ಸ್ಥಳಾಂತರ

Public TV
2 Min Read
mdk bhu kusita

ಮಡಿಕೇರಿ: ಮುಂಗಾರು ಆರಂಭವಾಗಿ ಕೇವಲ ಒಂದು ವಾರವಷ್ಟೇ ಕಳೆದಿದೆ. ಅದರಲ್ಲೂ ಮಳೆಯ ತೀವ್ರತೆ ಅಷ್ಟೇನು ಇಲ್ಲ. ಕಡಿಮೆ ಮಳೆಗೇ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಮತ್ತೇನಾದರೂ ದುರಂತ ಸಂಭವಿಸುವುದೇ ಎಂಬ ಆತಂಕ ಎದುರಾಗಿದೆ.

ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ದುರಂತಗಳು ಜಿಲ್ಲೆಯ ಜನರ ಕಣ್ಮುಂದೆ ಇವೆ. ಅದಾಗಲೇ ಜಿಲ್ಲೆಯಲ್ಲಿ ಮತ್ತೊಂದು ದುರಂತದ ಲಕ್ಷಣ ಎದುರಾಗಿದೆ. ಒಂದು ವಾರದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ವೇಳೆ ಸುರಿದ ಮಳೆಗೆ ಮಡಿಕೇರಿಯ ಚಾಮುಂಡೇಶ್ವರಿ ನಗರದ ಶ್ಯಾಮ್ ಅವರ ಮನೆಯ ಬಳಿ ಸ್ವಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಇದು ಸುತ್ತಲಿನ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.

vlcsnap 2020 06 18 15h39m27s252

ಬುಧವಾರ ಸಂಜೆ ಸ್ವಲ್ಪ ಪ್ರಮಾಣದ ಭೂ ಕುಸಿತವಾಗುತ್ತಿದ್ದಂತೆ ಜನರು ಭಯಗೊಂಡು ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ಎನ್‍ಡಿಆರ್ ಎಫ್ ತಂಡ ಸೇರಿದಂತೆ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ತಕ್ಷಣವೇ ಐದು ಕುಟುಂಬಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ ಇನ್ನೂ ಕೂಡ ಕೆಲವು ಮನೆಗಳಿಗೆ ಇದರಿಂದ ಆತಂಕ ಎದುರಾಗಿದ್ದು, ಮನೆಗಳಿಂದ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಬೇಕೆಂದು ಜನ ಆಗ್ರಹಿಸಿದ್ದಾರೆ.

ಚಾಮುಂಡೇಶ್ವರಿ ನಗರದ ಶ್ಯಾಮ್ ಅವರ ಮನೆಯ ಸುತ್ತಮುತ್ತಲಿನ ಐದು ಕುಟುಂಬಗಳನ್ನು ರಾತ್ರೋ ರಾತ್ರಿ ಸ್ಥಳಾಂತರ ಮಾಡಲಾಗಿದೆ. ಉಳಿದಿರುವ ಮನೆಗಳಲ್ಲೂ ಮಕ್ಕಳು, ವೃದ್ಧರಿದ್ದು, ಭೂ ಕುಸಿತವಾದಲ್ಲಿ ಭಾರೀ ಅನಾಹುತ ಎದುರಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬೆಳಿಗ್ಗೆ ಉಪವಿಭಾಗ ಅಧಿಕಾರಿ ಜವರೇಗೌಡ, ನಗರ ನೋಡೆಲ್ ಅಧಿಕಾರಿ ಅರುಂಧತಿ ಸೇರಿದಂತೆ ಮಡಿಕೇರಿ ನಗರ ಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

vlcsnap 2020 06 18 15h40m07s141

ಭಾಗ್ಯ ಅವರ ಮನೆ ಮತ್ತು ಎದುರಿನ ಮನೆಗಳು ತೀವ್ರ ಅಪಾಯದಲ್ಲಿ ಇರುವುದರಿಂದ ಎರಡು ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲಾಗುವುದು. 2018ರಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ವಿತರಣೆ ಮಾಡಲು ಜಂಬೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳಲ್ಲಿ ಈ ಇಬ್ಬರಿಗೂ ಮನೆಗಳನ್ನು ಕೊಡಲಾಗುವುದು. ಅಲ್ಲದೆ ತೀರಾ ಆತಂಕಗೊಳ್ಳುವ ರೀತಿಯಲ್ಲಿ ಭೂ ಕುಸಿತವಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಬರೆ ಕುಸಿದಿದ್ದು, ಯಾವುದೇ ತೊಂದರೆ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಜವರೇಗೌಡ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *