ಚೀನಾದಿಂದ ಪೂರ್ವನಿಯೋಜಿತ ದಾಳಿ – ಭಾರತದ ಖಡಕ್‌ ಮಾತು

Public TV
2 Min Read
India China

– ಭಾರತ ಚೀನಾ ನಡುವೆ ದೂರವಾಣಿ ಮಾತುಕತೆ
– ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ  ದೇಶಗಳ ಒಪ್ಪಿಗೆ

ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೈನಿಕರು ಪೂರ್ವನಿಯೋಜಿತವಾಗಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಭಾರತ ಚೀನಾಗೆ ಖಡಕ್‌ ಆಗಿ ತಿಳಿಸಿದೆ.

ಸೋಮವಾರ ರಾತ್ರಿ ಗಡಿಯಲ್ಲಿ ಎರಡು ರಾಷ್ಟ್ರಗಳ ಸೈನಿಕರ ಮಧ್ಯೆ ಘರ್ಷಣೆ ನಡೆದ ಬಳಿಕ ಬುಧವಾರ ಭಾರತದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ವೈ ಮಧ್ಯೆ ದೂರವಾಣಿ ಮಾತುಕತೆ ನಡೆಯಿತು.

ಭಾರತ ಹೇಳಿದ್ದು ಏನು?
ಜೂನ್‌ 6 ರಂದು ನಡೆದ ಮಿಲಿಟರಿ ಕಮಾಂಡರ್‌ ಮಟ್ಟದ ಮಾತುಕತೆಯ ವೇಳೆ ಎಲ್‌ಎಸಿಯಿಂದ ಸೇನೆ ಹಿಂದಕ್ಕೆ ಬರುವ ಸಂಬಂಧ ಮಾತುಕತೆ ನಡೆದಿತ್ತು. ಆದರೆ ಚೀನಾ ಸೇನೆ ಭಾರತದ ಎಲ್‌ಎಸಿ ಬಳಿ ಟೆಂಟ್‌ ನಿರ್ಮಿಸಿತ್ತು. ವಿವಾದಕ್ಕೆ ಕಾರಣವಾದ ಈ ಟೆಂಟ್‌ ಅನ್ನು ಚೀನಾ ತೆರವು ಮಾಡಬೇಕಿತ್ತು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಚೀನಾ ಸೇನೆ ಪೂರ್ವ ನಿಗದಿಯಂತೆ ದಾಳಿ ನಡೆಸಿದೆ. ಇದರಿಂದಾಗಿ ಸಾವು ನೋವು ಸಂಭವಿಸಿದೆ. ಈ ಘಟನೆಗೆ ಚೀನಾವೇ ನೇರ ಕಾರಣ.

ಈ ಘಟನೆಯಿಂದ ದ್ವಿಪಕ್ಷೀಯ ಮಾತುಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಜೂನ್‌ 6 ರಂದು ಕಮಾಂಡರ್‌ ಮಟ್ಟ ಮಾತುಕತೆಯ ವೇಳೆ ಏನು ನಿರ್ಧಾರ ಮಾಡಲಾಗಿದೆಯೋ ಅದನ್ನು ಎರಡು ದೇಶಗಳು ಪಾಲಿಸಬೇಕು. ಎರಡು ಕಡೆಯ ಸೈನಿಕರು ದ್ವಿಪಕ್ಷೀಯ ಒಪ್ಪಂದವನ್ನು ಪಾಲಿಸಬೇಕು ಎಂದು ಭಾರತ ಹೇಳಿದೆ.

ಚೀನಾ ಹೇಳಿದ್ದು ಏನು?
ಭಾರತದ ಸೇನೆ ಎಲ್‌ಎಸಿ ದಾಟಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದೆ. ಭಾರತ ಎಲ್ಲ ಒಪ್ಪಂದಗಳನ್ನು ಉಲ್ಲಂಘಿಸಿ ಈ ಕೃತ್ಯ ಎಸಗಿದೆ. ಚೀನಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಚೀನಿ ಸೈನಿಕರ ಮೇಲೆ ಹಲ್ಲೆ ಎಸಗಿದವರ ವಿರುದ್ಧ ಭಾರತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದು. ನೂರು ಕೋಟಿ ಜನಸಂಖ್ಯೆ ಇರುವ ದೇಶಗಳಾದ ನಾವು ಅಭಿವೃದ್ಧಿ ವಿಚಾರಗಳಿಗೆ ಮನ್ನಣೆ ನೀಡಬೇಕು.

ಕೊನೆಯಲ್ಲಿ ಏನಾಯ್ತು?
ಎರಡು ದೇಶಗಳು ಯಾಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದು, ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ..

Share This Article