– ರೋಗ, ಮಳೆ ಆಯ್ತು, ಈಗ ಮಿಡತೆ ಕಾಟ
ಚಿಕ್ಕಮಗಳೂರು: ಉತ್ತರ ಭಾರತದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಎಂಬ ಗ್ರಾಮದಲ್ಲಿ ಅಡಿಕೆ ತೋಟಗಳ ಮೇಲೆ ದಾಳಿ ಮಾಡಿರೋ ಮಿಡತೆಗಳು ಅಡಿಕೆ ಮರದ ಗರಿಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಿಕೆ ತೋಟದಲ್ಲಿ ಮಿಡತೆಗಳನ್ನು ಕಂಡ ಮಲೆನಾಡಿಗರು ಕಂಗಾಲಾಗಿದ್ದಾರೆ. ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಔಷಧಿಯೇ ಇಲ್ಲದ ರೋಗಕ್ಕೆ ಮಲೆನಾಡಿಗರು ತಲೆಕೆಡಿಸಿಕೊಂಡಿದ್ದಾರೆ.
ಹತೋಟಿಗೆ ಬಾರದ ಈ ರೋಗಕ್ಕೆ ಬೇಸತ್ತ ಮಲೆನಾಡಿಗರು ಗ್ರಾಮಗಳನ್ನು ತ್ಯಜಿಸಿ, ತೋಟ ಮನೆಗಳನ್ನು ಪಾಳು ಬಿಟ್ಟು ನಗರ ಸೇರಿದ್ದರು. ಗ್ರಾಮಗಳು ವೃದ್ಧಾಶ್ರಮಗಳಾಗಿದ್ದವು. ಕೆಲ ಬೆಳೆಗಾರರು ತೋಟಗಳನ್ನು ನಿರ್ವಹಣೆ ಮಾಡುವುದನ್ನೇ ಕೈ ಬಿಟ್ಟಿದ್ದರು. ಕೆಲವರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದರೆ, ಮತ್ತೆ ಕೆಲವರು ನಾನಾ ರೀತಿಯ ಔಷಧಗಳೊಂದಿಗೆ ಅಡಿಕೆ ಮೇಲೆ ಅವಲಂಬಿತರಾಗಿದ್ದರು. ಹಲವರು ವಾಸದ ಮನೆಗಳನ್ನು ಪಾಳು ಬಿಟ್ಟು ಬದುಕಿಗಾಗಿ ದೊಡ್ಡ-ದೊಡ್ಡ ನಗರ ಸೇರಿದ್ದರು.
ಮಲೆನಾಡಿನ ಸ್ಥಿತಿ ಹೀಗಿರುವಾಗ ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಿಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು. ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಪ್ರಕೃತಿ ಜೊತೆ ಸದಾ ಜೂಜಿಗಿಳಿದು ಬದುಕು ಕಟ್ಟಿಕೊಂಡಿದ್ದ ಮಲೆನಾಡಿಗರಿಗೆ ಈಗ ಮಿಡತೆ ಕಾಟ ಕೂಡ ಆರಂಭವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.