ಬೀದರ್: ದಿನೇ ದಿನೇ ಡೆಡ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದ್ದು, ಮುಂಬೈ ಹಾಗೂ ಹೈದ್ರಾಬಾದ್ ಕಂಟಕದಿಂದಾಗಿ ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ 48 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಬಸವಕಲ್ಯಾಣ ತಾಲೂಕಿನಲ್ಲಿ 29 ವಲಸೆ ಕಾರ್ಮಿಕರಿಗೆ, ಕಮಲಾನಗರ ತಾಲೂಕಿನಲ್ಲಿ 4, ಚಿಟ್ಟಗುಪ್ಪ ತಾಲೂಕಿನಲ್ಲಿ 3, ಹುಮ್ನಬಾದ್ ತಾಲೂಕಿನಲ್ಲಿ 8 ಹಾಗೂ ಭಾಲ್ಕಿ ತಾಲೂಕಿನ 4 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಒಟ್ಟು 48 ಪ್ರಕರಣದಲ್ಲಿ 41 ಪಾಸಿಟಿವ್ ಪ್ರಕರಣಗಳು ಮುಂಬೈ ಕಂಟಕದಿಂದ, ಹೈದ್ರಾಬಾದ್ ನಿಂದ ಜಿಲ್ಲೆಗೆ ಬಂದಿದ್ದ 4 ವಲಸೆ ಕಾರ್ಮಿಕರಿಗೆ ಸೋಂಕು ಧೃಡವಾಗಿದೆ. ಇನ್ನು ಚಿಟ್ಟಗುಪ್ಪ ತಾಲೂಕಿನ ರೋಗಿ ನಂ.2,967 ಹಾಗೂ 2,968 ಸೋಂಕಿತರ ಸಂಪರ್ಕದಿಂದ 30 ವರ್ಷದ ಇಬ್ಬರು ಮಹಿಳೆಯರಿಗೆ ಹಾಗೂ ರೋಗಿ ನಂ.1,430 ಸಂಪರ್ಕದಿಂದ 12 ವರ್ಷದ ಬಾಲಕಿ ಸೇರಿ 3 ಜನರಿಗೆ ಸೋಂಕು ಧೃಡವಾಗಿದೆ.
ಮುಂಬೈ ಕಂಟಕದ ಜೊತೆಗೆ ಇಂದು ಹೈದ್ರಾಬಾದ್ ಕಂಟಕ ಕೂಡಾ ಜಿಲ್ಲೆಗೆ ಶಾಕ್ ನೀಡಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ. ಇದರಲ್ಲಿ 167 ಸಕ್ರಿಯ ಪ್ರಕರಣಗಳಿದ್ದು, 97 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಾಹಾಮಾರಿಯಿಂದಾಗಿ ಜಿಲ್ಲೆಯಲ್ಲಿ 6 ಜನ ಸಾವನ್ನಪ್ಪಿದ್ದಾರೆ.