ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ 39 ವರ್ಷಕ್ಕೆ ತಮ್ಮ ಬದುಕನ್ನು ಮುಗಿಸಿದ್ದು, ಬೃಂದಾವನದಲ್ಲಿ ಚಿರಂಜೀವಿ ಸರ್ಜಾ ಚಿರು ನಿದ್ರೆಗೆ ಜಾರಿದ್ದಾರೆ.
ಕನಕಪುರ ರಸ್ತೆ ಬಳಿಯಿರುವ ನೆಲಗೂಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನೆರವೇರಿದೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, ‘ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆದಿದ್ದು, ಚಿರಂಜೀವಿ ಸರ್ಜಾ ಮಣ್ಣಲ್ಲಿ ಮಣ್ಣಾಗಿದ್ದಾರೆ.
ಭಾನುವಾರ ರಾತ್ರಿಯಿಂದಲೇ ಬೆಂಗಳೂರಿನ ಬಸನವಗುಡಿ ಚಿರಂಜೀವಿ ಸರ್ಜಾ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಭಿಮಾನಿಗಳು, ಸ್ನೇಹಿತರು, ಸಿನಿ ಗಣ್ಯರು, ಸಂಬಂಧಿಕರು ಸೇರಿದಂತೆ ಸಾವಿರಾರು ಮಂದಿ ಬಂದು ಚಿರಂಜೀವಿ ಸರ್ಜಾ ಅವರ ಅಂತಿಮ ದರ್ಶನ ಪಡೆದಿದ್ದರು.
ಇಂದು ಮಧ್ಯಾಹ್ನ ಮನೆಯ ಬಳಿ ಅಂತಿಮ ವಿಧಿವಿಧಾನಗಳನ್ನು ಮುಗಿಸಿದ ನಂತರ ತೆರೆದ ವಾಹನದ ಮೂಲಕ ಕನಕಪುರದ ಬಳಿ ಇರುವ ಫಾರ್ಮ್ ಹೌಸ್‍ಗೆ ಚಿರಂಜೀವಿ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಹಾಗೂ ಗಣ್ಯರಿಗಾಗಿ ಪೆಂಡಲ್ ವ್ಯವಸ್ಥೆ ಮಾಡಲಾಗಿತ್ತು. ರಾಮನಗರ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಬಂದೋಬಸ್ತ್ ಮಾಡಿದ್ದರು.
ಭಾನುವಾರ ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿತ್ತು. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.