ಕೊಡಗು: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಆರಂಭಗೊಂಡಿದೆ. ಇಂದು ಬೆಳಗ್ಗೆಯಿಂದಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆ ಸುರಿಯಲಾರಂಭಿಸಿದೆ. ಮುಂಗಾರು ಆರಂಭವಾಗುತ್ತಿದ್ದಂತೆ ಮಡಿಕೇರಿ, ಭಾಗಮಂಡಲ ಮೂರ್ನಾಡು ಸೇರಿದಂತೆ ಹಲವೆಡೆ ವರುಣರಾಯ ಅಬ್ಬರಿಸುತ್ತಿದ್ದಾನೆ.
ಕಳೆದ ಎರಡು ವರ್ಷಗಳಲ್ಲಿ ಉಂಟಾದ ಪ್ರವಾಹಕ್ಕೆ ಬೆಚ್ಚಿ ಬಿದ್ದಿರುವ ಜನ ಈ ಬಾರಿ ಏನಾಗುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಈಗಾಗಲೇ ಮಡಿಕೇರಿಯ ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರು ಮುಂಜಾಗ್ರತ ಕ್ರಮವಾಗಿ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳದತ್ತ ಹೊರಟಿದ್ದಾರೆ.
ಇನ್ನು ಶನಿವಾರ ಸಂಜೆ ಬೆಂಗಳೂರಿನ ಬಹುತೇಕ ಕಡೆ ವರುಣ ಅಬ್ಬರಿಸಿದ್ದಾನೆ. ವೀಕೆಂಡ್ ಹಿನ್ನೆಲೆಯಲ್ಲಿ ಊರುಗಳಿಗೆ ಹೊರಟ್ಟಿದ್ದ ಬೈಕ್ ಸವಾರರು ಮಳೆಯಲ್ಲಿ ಸಿಲುಕಿ ಹೈರಾಣದರು. ಇನ್ನುಳಿದಂತೆ ವಿಧಾನಸೌಧ, ಕೆ.ಆರ್ ಸರ್ಕಲ್, ಮೆಜೆಸ್ಟಿಕ್, ಕಾರ್ಪೋರೇಷನ್, ಶಿವಾಜಿನಗರ, ನಾಗರಬಾವಿ, ವಿಜಯನಗರ ಸೇರಿದಂತೆ ಹಲವು ಕಡೆ ಮಳೆಯಾಗಿದೆ.