‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಾಯಿಸಲು ನಮಗೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್

Public TV
2 Min Read
Supreme Court

ನವದೆಹಲಿ: ‘ಇಂಡಿಯಾ’ ಹೆಸರನ್ನು ‘ಭಾರತ್’ ಎಂದು ಬದಲಾಯಿಸಲು ನಮಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿ ಮೂಲದ ವಕೀಲ ಅಶ್ವಿನ್ ವೈಶ್ಯ ಎಂಬವರು ‘ಇಂಡಿಯಾ’ ಹೆಸರನ್ನು ‘ಭಾರತ್’ ಅಥವಾ ‘ಹಿಂದೂಸ್ತಾನ್’ ಎಂದು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈಗಾಗಲೇ ಭಾರತದ ಸಂವಿಧಾನದಲ್ಲಿ ‘ಭಾರತ್’ ಹೆಸರು ಉಲ್ಲೇಖವಾಗಿದೆ. ನಮಗೆ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಬೇಕಾದರೆ ನೀವು ಸರ್ಕಾರದ ಸಂಬಂಧ ಪಟ್ಟ ಸಚಿವಾಲಯಯಕ್ಕೆ ಅರ್ಜಿಯನ್ನು ರವಾನಿಸಬಹುದು. ಸಚಿವಾಲಯವೇ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಅರ್ಜಿದಾರಿಗೆ ಸೂಚಿಸಿ ಮುಖ್ಯ ನ್ಯಾ. ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಪಿಐಎಲ್ ಇತ್ಯರ್ಥ ಮಾಡಿದೆ.

S A Bobde A 3

ಅರ್ಜಿಯಲ್ಲಿ ಏನಿತ್ತು?
ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಬದಲಾಯಿಸುವ ಸಲುವಾಗಿ ಸಂವಿಧಾನದ ಪರಿಚ್ಛೇದ 1ಕ್ಕೆ ತಿದ್ದುಪಡಿ ಮಾಡುವಂತೆ ವಕೀಲ ಅಶ್ವಿನ್ ಪಿಐಎಲ್ ಸಲ್ಲಿಸಿದ್ದರು.

ಭಾರತ್ ಅಥವಾ ಹಿಂದೂಸ್ತಾನ್ ಬದಲು ಬ್ರಿಟಿಷರು ನೀಡಿದ ಇಂಡಿಯಾ ಎಂಬ ಹೆಸರನ್ನು ಈಗಲೂ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಬ್ರಿಟಿಷ್ ಗುಲಾಮಗಿರಿಯ ಸಂಕೇತವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅಶ್ವಿನ್ ಪ್ರತಿಕ್ರಿಯಿಸಿದ್ದರು.

passport visa india

ಬ್ರಿಟಿಷರು ನೀಡಿದ ಹೆಸರನ್ನು ತಗೆದು ಹಾಕಿ ದೇಶಕ್ಕೆ ಭಾರತ್ ಅಥವಾ ಹಿಂದೂಸ್ತಾನ್ ಎಂಬ ನಾಮಕರಣ ಮಾಡಬೇಕು. ಪ್ರಸ್ತುತ ದೇಶವನ್ನು ‘ಇಂಡಿಯಾ’, ‘ರಿಪಬ್ಲಿಕ್ ಆಫ್ ಇಂಡಿಯಾ’, ‘ಭಾರತ್ ಗಣರಾಜ್ಯ’ ಇತ್ಯಾದಿ ಹೆಸರುಗಳಿವೆ. ಈ ಹೆಸರುಗಳ ಬದಲಾಗಿ ‘ಭಾರತ್’ ಒಂದೇ ಹೆಸರನ್ನು ಎಲ್ಲ ಕಡೆ ಬಳಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

aadhar card 0

ಆಧಾರ್ ಕಾರ್ಡ್‍ನಲ್ಲಿ ‘ಭಾರತ್ ಸರ್ಕಾರ್’, ಡ್ರೈವಿಂಗ್ ಲೈಸನ್ಸ್  ನಲ್ಲಿ ‘ಇಂಡಿಯನ್ ಯೂನಿಯನ್’ ಪಾಸ್‍ ಪೋರ್ಟ್ ನಲ್ಲಿ ‘ರಿಪಬ್ಲಿಕ್ ಆಫ್ ಇಂಡಿಯಾ’ ಎಂದು ನಮೂದಿಸಲಾಗಿದೆ. ಏಕರೂಪದ ಹೆಸರು ಇಲ್ಲದ ಕಾರಣ ಗೊಂದಲಗಳು ಜಾಸ್ತಿಯಾಗಿದೆ. ಹೀಗಾಗಿ ಏಕರೂಪದ ‘ಭಾರತ್’ ಹೆಸರನ್ನು ಜಾರಿ ಮಾಡಬೇಕೆಂದು ಕೇಳಿಕೊಂಡಿದ್ದರು.

ಪಿಐಎಲ್ ಸಲ್ಲಿಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಹಲವರು ಆ ಅರ್ಜಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದರೆ ಕೆಲವರು ಹೆಸರು ಬದಲಾವಣೆಯಿಂದ ಲಾಭ ಏನು ಎಂದು ಪ್ರಶ್ನಿಸಿದ್ದರು.

karnataka RC and Driving licences

ವಜಾಗೊಂಡಿತ್ತು:
2016ರಲ್ಲಿ ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡುವಂತೆ ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ಈ ವೇಳೆ ಕೋರ್ಟ್, “ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವುದನ್ನು ಬಿಟ್ಟು ನಮಗೆ ಬೇರೆ ಕೆಲಸವಿಲ್ಲ ಎಂದು ಭಾವಿಸಿದ್ದೀರಾ? ಬಡವರಿಗೆ ಸಹಾಯ ಮಾಡಲು ಪಿಐಎಲ್ ಹಾಕಿ. ನೀವು ಭಾರತ್ ಎಂದು ಕರೆಯಲು ಬಯಸಿದರೆ ನೀವು ಕರೆಯಬಹುದು. ನಿಮ್ಮನ್ನು ಯಾರೂ ತಡೆಯುವುದಿಲ್ಲ” ಎಂದು ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *