ಮಡಿಕೇರಿ: ಭೂಮಿಯೊಳಗೆ ಹುದುಗಿರುವ ಮಹಾಕಾಳಿ ದೇವರ ವಿಗ್ರಹಗಳನ್ನು ಹೊರ ತೆಗೆಯಲು ಒತ್ತಾಯಿಸಿ ಮಹಿಳೆಯೊಬ್ಬರು ಪಟ್ಟಣ ಪಂಚಾಯ್ತಿ ಮುಂದೆ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣ ಪಂಚಾಯ್ತಿ ಅವರಣದಲ್ಲಿ ನಡೆದಿದೆ.
ಕುಶಾಲನಗರದ ಶಾಂತಲಾ ಅಕ್ಷರಶಕ್ತಿ ಎಂಬ ಮಹಿಳೆ ಕಳೆದ ಹಲವು ವರ್ಷಗಳಿಂದಲೂ ತನ್ನ ಈ ಬೇಡಿಕೆಯನ್ನು ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸೇರಿದಂತೆ ಹಲವು ಇಲಾಖೆಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದ್ದರು. ಆದರೂ ಕೂಡ ಇದೂವರೆಗೆ ಅವರ ಬೇಡಿಕೆ ಈಡೇರಿಸಲು ಯಾರೂ ಮುಂದಾಗಿಲ್ಲ ಎಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯ್ತಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಛೇರಿ ಹಿಂಭಾಗ ಕಟ್ಟಡವೊಂದರಲ್ಲಿ 20 ಅಡಿಗಳ ಆಳದಲ್ಲಿ ದೇವರ ವಿಗ್ರಹಗಳು ಹುದುಗಿವೆ. ತನ್ನ ಕನಸಿನಲ್ಲಿ ಕಾಣಿಸಿಕೊಳ್ಳುವ ದೇವತೆಗಳು ವಿಗ್ರಹಕ್ಕೆ ಮುಕ್ತಿ ಕಲ್ಪಿಸಲು ತನಗೆ ಸೂಚಿಸುತ್ತಿದ್ದಾರೆ. ಆದರೆ ಇದನ್ನು ಸಾಕಾರಗೊಳಿಸಲು ಯಾವುದೇ ಅಧಿಕಾರಿಗಳು ಸಹಕಾರ ತೋರುತ್ತಿಲ್ಲ. ಆದ್ದರಿಂದ ಕೂಡಲೆ ತನ್ನ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಏಕಾಂಗಿಯಾಗಿ ಪಟ್ಟಣ ಪಂಚಾಯ್ತಿ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಈ ಬಗ್ಗೆ ಅನುಮತಿ ಕಲ್ಪಿಸುವವರೆಗೆ ಸತ್ಯಾಗ್ರಹ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.