ಮಲೆನಾಡಿಗೆ ಕಂಟಕವಾಯ್ತು ಪಾದರಾಯನಪುರದ ಕೊರೊನಾ

Public TV
2 Min Read
SMG Police

– ಶಿವಮೊಗ್ಗದಲ್ಲಿ ಮೊದಲ ಬಾರಿಗೆ ವೈದ್ಯೆಗೂ ಸೋಂಕು

ಶಿವಮೊಗ್ಗ: ಕೊರೊನಾ ಆರಂಭದ ಎರಡು ತಿಂಗಳಲ್ಲಿ ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಕೊರೊನಾ ವೈರಸ್ ಸುಳಿವೇ ಇರಲಿಲ್ಲ. ಆದರೆ ಗುಜರಾತ್‍ನ ಅಹಮದಾಬಾದ್‍ನಿಂದ ತಬ್ಲಿಘಿಗಳು ಜಿಲ್ಲೆಗೆ ಕಾಲಿಟ್ಟರೋ ಆ ದಿನವೇ ಕೊರೊನಾ ವೈರಸ್ ವಕ್ಕರಿಸಿತ್ತು. ನಂತರದ ದಿನಗಳಲ್ಲಿ ಇತರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದವರಿಗೆ ಪಾಸಿಟಿವ್ ಬಂದಿತ್ತು. ಇದೀಗ ಜಿಲ್ಲೆಗೆ ಬೆಂಗಳೂರಿನ ಪಾದರಾಯನಪುರ ಸಹ ಕಂಟಕವಾಗಿ ಕಾಡುತ್ತಿದೆ.

ಹೌದು, ಶಿವಮೊಗ್ಗದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಮೊದಲು ಹೊರ ರಾಜ್ಯಗಳಿಂದ ಜಿಲ್ಲೆಗೆ ಭೇಟಿ ನೀಡಿದವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಇದೀಗ ಬೆಂಗಳೂರಿನ ಪಾದರಾಯನಪುರ ಹಾಗೂ ಶಿವಾಜಿನಗರ ಸಹ ಮಲೆನಾಡಿಗೆ ಕಂಟಕವಾಗಿ ಕಾಡುತ್ತಿದೆ.

coronavirus risk warning 1

ಪಾದರಾಯನಪುರದಲ್ಲಿ ಗಲಭೆ ನಡೆದಾಗ ಜಿಲ್ಲೆಯಿಂದ 22 ಮಂದಿ ಕೆಎಸ್‌ಆರ್‌ಪಿ ಪೊಲೀಸರು ಕರ್ತವ್ಯಕ್ಕೆ ತೆರಳಿದ್ದರು. ಇವರೆಲ್ಲರೂ ಕಳೆದ 4 ದಿನಗಳ ಹಿಂದೆ ಜಿಲ್ಲೆಗೆ ವಾಪಸ್ ಬಂದಿದ್ದರು. ಜಿಲ್ಲೆಗೆ ವಾಪಸ್ಸಾದ ಅವರಿಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಟೆಸ್ಟ್ ನಡೆಸಿ ಕ್ವಾರಂಟೈನ್‍ಗೆ ಒಳಪಡಿಸಿತ್ತು. ಈವರೆಗೂ 22 ಜನರ ಪೈಕಿ 10 ಮಂದಿಗೆ ಕೊರೊನಾ ದೃಢಪಟ್ಟಿದೆ. ಎರಡು ದಿನದ ಹಿಂದೆ ಮೂವರ ರಿಪೋರ್ಟ್ ಕೂಡ ಪಾಸಿಟಿವ್ ಬಂದಿತ್ತು. ಇಂದು 7 ಮಂದಿ ಪೊಲೀಸರಿಗೆ ಪಾಸಿಟಿವ್ ದೃಢಪಟ್ಟಿದೆ. ಉಳಿದ 12 ಜನರ ವರದಿ ಬರಬೇಕಿದೆ. ಅಲ್ಲದೇ ಸೋಂಕಿತರನ್ನು ಈಗಾಗಲೇ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೆಎಸ್‌ಆರ್‌ಪಿ ಪೊಲೀಸರ ಜೊತೆಗೆ ಡಿಎಆರ್‍ನ ಓರ್ವ ಎಎಸ್‍ಐಗೂ ಕೊರೊನಾ ತಗುಲಿದೆ. ಪಾಸಿಟಿವ್ ಪತ್ತೆಯಾಗಿರುವ ಎಎಸ್‍ಐಗೆ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲದಿದ್ದರೂ, ಅವರು ಜಿಲ್ಲೆಯ ಗಡಿಭಾಗದ ಚೆಕ್‍ಪೋಸ್ಟ್ ಗಳಲ್ಲಿ ಕಳೆದ ಹಲವು ದಿನಗಳಿಂದ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದ ವೇಳೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸಿದ್ದರು. ಹೀಗಾಗಿ ಡಿಎಆರ್ ಎಎಸ್‍ಐಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

SMG 1

ಇದೇ ಮೊದಲ ಬಾರಿಗೆ ಜಿಲ್ಲೆಯ ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯೊಬ್ಬರಿಗೂ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಹಿಂದೆ ಶಿವಮೊಗ್ಗದ ಬಾಳೆಕೊಪ್ಪದ 63 ವರ್ಷದ ರೋಗಿ-1305 ವೃದ್ಧನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಪತ್ತೆಯಾಗುವ ಎರಡು ದಿನದ ಹಿಂದೆ ವೃದ್ಧ ಆಯನೂರಿನ ಆಸ್ಪತ್ರೆಯಲ್ಲಿ ಚಳಿ ಜ್ವರ ಎಂದು ಚಿಕಿತ್ಸೆಗೆ ತೆರಳಿದ್ದರು. ಆತನಿಗೆ ವೈದ್ಯೆ ಚಿಕಿತ್ಸೆ ನೀಡಿದ್ದರು. ಇದೀಗ ಚಿಕಿತ್ಸೆ ನೀಡಿದ್ದ ವೈದ್ಯೆಗೆ ಕೊರೊನಾ ತಗುಲಿದ್ದು, ಅವರನ್ನು ಸಹ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಯಾರಿಂದ ವೈದ್ಯೆಗೆ ಪಾಸಿಟಿವ್ ಕಾಣಿಸಿಕೊಂಡಿತ್ತೋ ಆ ವೃದ್ಧ ಗುಣಮುಖರಾಗಿ ಭಾನುವಾರ ಡಿಸ್ಚಾರ್ಜ್ ಕೂಡ ಆಗಿದ್ದಾರೆ.

corona Virus 6

ಡಿಎಆರ್ ಎಎಸ್‍ಐಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಜಯನಗರ ಠಾಣೆಯನ್ನು ಸ್ಯಾನಿಟೈಸರ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರ ಪುತ್ರಿ ಸಹ ಇದೇ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಅವರು ತಂದೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರಬಹುದು ಎಂಬ ಕಾರಣದಿಂದ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *