ಹಾಸನ: ಕೊರೊನಾ ಭಯವನ್ನೂ ಮರೆತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಎದುರಲ್ಲೇ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಘಟನೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿರುವ ಹಿನ್ನೆಲೆ ಪದಗ್ರಹಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಈ ವೇಳೆ ಮುಸ್ಲಿಂ ನಾಯಕರ ಹೆಸರು ಹೇಳಲಿಲ್ಲವೆಂದು ಅಲ್ಪ ಸಂಖ್ಯಾತ ಘಟಕ ಮಾಜಿ ಅಧ್ಯಕ್ಷ ಅಬ್ದುಲ್ ಆದಿಲ್ ಗಲಾಟೆ ತೆಗೆದಿದ್ದಾರೆ.
ಈ ವೇಳೆ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದನ್ನು ಕಂಡು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಕಿಡಿಕಾರಿದ್ದು, ಇದು ಕಾಂಗ್ರೆಸ್ ಕಟ್ಟುವ ರೀತೀನಾ, ಅದಕ್ಕೆ ಕಾಂಗ್ರೆಸ್ ಈ ರೀತಿ ಆಗಿರೋದು ಎಂದು ಆಕ್ರೋಶ ಹೊರ ಹಾಕಿದರು. ಜಿಲ್ಲಾಧ್ಯಕ್ಷರೇ ಗಲಾಟೆ ಮಾಡಿದವರ ಲಿಸ್ಟ್ ಬೇಕು. ಪಾರ್ಟಿಯಿಂದ ಅವರನ್ನು ಸಸ್ಪೆಂಡ್ ಮಾಡಬೇಕು, ಇಲ್ಲದಿದ್ದರೆ ಇದು ಸರಿ ಹೋಗಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯ ಸರ್ಕಾರ ಕೊರೊನಾ ನಿಭಾಯಿಸುವಲ್ಲಿ ವಿಫಲವಾಗಿದೆ. ಈ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೇ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಣ್ಣಿದ್ದೂ ಕುರುಡಾಗಿವೆ. ರಾಜ್ಯ ಸರ್ಕಾರ 2,500 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ. ರಾಜ್ಯದ ಜನ ಕೊರೊನಾದಿಂದ ಪರಿತಪಿಸುತ್ತಿದ್ದರೂ, ಸಮಸ್ಯೆ ಬಗೆಹರಿಸಲು ಇವರಿಗೆ ಸಮಯವಿಲ್ಲ. ಅಧಿಕಾರಕ್ಕಾಗಿ ಡಿನ್ನರ್, ಟಿಫನ್ ಸಭೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.