ರೆಬೆಲ್‍ಸ್ಟಾರ್ ಬರ್ತ್‍ಡೇಗೆ ಡಿಫರೆಂಟಾಗಿ ವಿಶ್ ಮಾಡಿದ್ರು ನೀನಾಸಂ ಸತೀಶ್!

Public TV
2 Min Read
NINASAM

– ಕಲಿಯುಗದ ಕರ್ಣನ ನೆನಪಲ್ಲೊಂದು ಚೆಂದದ ಹಾಡು

ಭೌತಿಕವಾಗಿ ಮರೆಯಾದರೂ ಪ್ರತಿಯೊಬ್ಬರ ಮನಸ್ಸುಗಳಲ್ಲಿಯೂ ಅಜರಾಮರವಾಗಿರುವವರು ರೆಬೆಲ್ ಸ್ಟಾರ್ ಅಂಬರೀಶ್. ಹುಸಿಮುನಿಸು, ಒಂದಷ್ಟು ಬೈಗುಳಗಳ ಮೂಲಕವೇ ಪ್ರಾಂಜಲ ಪ್ರೀತಿಯನ್ನು ಎಲ್ಲರತ್ತಲೂ ದಾಟಿಸುತ್ತಿದ್ದ, ಎದುರು ಯಾರೇ ನಿಂತರೂ ಬೆಚ್ಚಗಿನ ಸ್ನೇಹವನ್ನು ಮನಸಾರೆ ಪ್ರವಹಿಸುತ್ತಿದ್ದ ಅಂಬರೀಶ್‍ರ ಬಗ್ಗೆ ಒಂದೇ ಗುಕ್ಕಿನಲ್ಲಿ ವಿವರಿಸೋದು ಕಷ್ಟ. ಎಷ್ಟೇ ಮಾತಾಡಿದರೂ, ಬರೆದರೂ ಅದರ ನಿಲುಕಿಗೆ ಸಿಗದ ಅಸಂಗತ ವ್ಯಕ್ತಿತ್ವ ಹೊಂದಿದ್ದ ಅಂಬರೀಶ್ ಹುಟ್ಟಿದ ದಿನವಿಂದು. ಈ ಸಂದರ್ಭದಲ್ಲಿ ಬಹುತೇಕರು ತಂತಮ್ಮದ್ದೇ ಆದ ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಅಂಬರೀಶ್‍ರನ್ನು ಸ್ಮರಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ನಟ ನೀನಾಸಂ ಸತೀಶ್ ಡಿಫರೆಂಟಾಗಿಯೇ ತಮ್ಮ ಆರಾಧ್ಯ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ambi

ಹಾಗೆ ನೀನಾಸಂ ಸತೀಶ್ ಅಂಬರೀಶ್ ಅವರಿಗೆ ಶುಭ ಕೋರಿರೋದು ಹಾಡಿನ ಮೂಲಕ ಎಂಬುದು ನಿಜವಾದ ವಿಶೇಷ. ಸತೀಶ್ ಯಾವ ಥರದ ಪಾತ್ರಗಳಿಗಾದರೂ ಎಲ್ಲರೂ ಮೆಚ್ಚುವಂತೆ ಜೀವ ತುಂಬ ಬಲ್ಲ ನಟ ಎಂಬುದು ಗೊತ್ತೇ ಇದೆ. ಆದರೆ ಅವರೊಳಗೊಬ್ಬ ಪ್ರತಿಭಾವಂತ ಗಾಯಕನೂ ಇದ್ದಾರೆಂಬ ವಿಚಾರವನ್ನು ಅಂಬಿ ಮೇಲಿನ ಅಭಿಮಾನವೇ ಜಾಹೀರು ಮಾಡಿದೆ. ಯಾಕೆಂದರೆ, ಎ2 ಮ್ಯೂಸಿಕ್ ಹೊರ ತಂದಿರೋ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಈ ಹಾಡನ್ನು ಖುದ್ದು ನೀನಾಸಂ ಸತೀಶ್ ಹಾಡಿದ್ದಾರೆ.

ambi 1

ಅಂಬರೀಶ್ ಮಂಡ್ಯದ ಗಂಡು ಎಂಬ ಬಿರುದನ್ನೂ ಪ್ರೀತಿಯಿಂದಲೇ ತನ್ನದಾಗಿಸಿಕೊಂಡಿದ್ದವರು. ಮಂಡ್ಯ ಅಂದರೆ ಅಂಬಿ ಎಂಬಂತೆ ಬ್ರ್ಯಾಂಡ್ ಆಗಿದ್ದ ಅವರಿಗೆ ಪಕ್ಕಾ ಮಂಡ್ಯ ಶೈಲಿಯ ಕನ್ನಡದಲ್ಲಿಯೇ ಈ ಹಾಡನ್ನು ರಚಿಸಿ ಅರ್ಪಿಸಲಾಗಿದೆ. ಈಗಾಗಲೇ ನಿರ್ದೇಶಕರಾಗಿ ಮಾತ್ರವಲ್ಲದೆ ಗೀತ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಭರ್ಜರಿ ಚೇತನ್ ಈ ಹಾಡನ್ನು ಬರೆದಿದ್ದಾರೆ. `ಮಂಡ್ಯದ ಗಂಡು ಕಲ ಕನ್ನಡದ ಆಸ್ತಿ ಕಲ, ದೋಸ್ತಿಗೆ ಬ್ರ್ಯಾಂಡು ಕಲಾ ನಮ್ ಜಲೀಲ’ ಅಂತ ಶುರುವಾಗೋ ಈ ಹಾಡಿನ ಪ್ರತೀ ಪದಗಳಲ್ಲಿಯೇ ಅಂಬರೀಶ್ ವ್ಯಕ್ತಿತ್ವ ಮತ್ತು ಅವರ ಮೇಲಿರೋ ಕರುನಾಡಿನ ಅಭಿಮಾನವನ್ನೇ ಎರಕ ಹೊಯ್ದಂತಿದೆ.

AMBI 2

ಸಂತೋಷ್ ವೆಂಕಿ ಸಂಗೀತದಲ್ಲಿ ಮೂಡಿ ಬಂದಿರೋ ಈ ಹಾಡನ್ನು ನೀನಾಸಂ ಸತೀಶ್ ಪಳಗಿದ ಗಾಯಕನಂತೆಯೇ ಚೆಂದಗೆ ಹಾಡಿದ್ದಾರೆ. ಆರಂಭ ಕಾಲದಿಂದಲೂ ಅಂಬರೀಶ್ ಅವರನ್ನು ಆರಾಧಿಸುತ್ತಾ, ಅವರ ಸಿನಿಮಾಗಳನ್ನು ಸರದಿಯಲ್ಲಿ ನಿಂತು ಟಿಕೆಟು ಖರೀದಿಸಿ ನೋಡುತ್ತಾ ಬೆಳೆದು ಬಂದವರು ನೀನಾಸಂ ಸತೀಶ್. ಈ ಕಾರಣದಿಂದಲೇ ಹಾಡಿನ ಮೂಲಕ ತನ್ನ ನೆಚ್ಚಿನ ನಟನಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಸದವಕಾಶ ಅವರನ್ನು ಅರಸಿ ಬಂದಿದೆ. ಈ ಹಾಡು ಘಂಟೆ ಕಳೆಯೋದರೊಳಗೆ ಟ್ರೆಂಡ್ ಸೆಟ್ ಮಾಡಲಾರಂಭಿಸಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ.

ambi 3

ವಿಕ್ರಮ ಸಾಫಲ್ಯ ನಿರ್ಮಾಣ ಮಾಡಿರುವ ಈ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಿಂದ ಹೊರ ಬಂದಿದೆ. ಇದು ನಿಜಕ್ಕೂ ಅರ್ಥಪೂರ್ಣವಾದ ಸಾಲುಗಳನ್ನೊಳಗೊಂಡಿರೋ ಹಾಡು. ಅಂಬರೀಶ್ ಅವರ ಟ್ರೇಡ್‍ಮಾರ್ಕಿನಂತಹ ಹಲವಾರು ಸಂಗತಿಗಳನ್ನು ಸೇರಿಸಿ ಹೊಸೆದಿರೋ ಈ ಸಾಹಿತ್ಯಕ್ಕೆ, ನೀನಾಸಂ ಸತೀಶ್ ಹಾಡಿದ ರೀತಿಗೆ ಅಂಬಿ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಸದ್ಯ ಲಾಕ್‍ಡೌನ್ ಮುಗಿದು ಮತ್ತೆ ಚಿತ್ರೀಕರಣ ಶುರುವಾಗೋ ಆಶಾವಾದ ಮೊಳೆತುಕೊಂಡಿರುವ ಈ ಘಳಿಗೆಯಲ್ಲಿ ಸತೀಶ್ ಮುಂಬರೋ ಚಿತ್ರಗಳಿಗಾಗಿ ಅಣಿಗೊಳ್ಳುತ್ತಿದ್ದಾರೆ. ಅದರ ನಡುವೆಯೂ ಅಂಬಿ ಮೇಲಿನ ಅಭಿಮಾನದಿಂದ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೀತಿಯಿಂದಲೇ ಹಾಡಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *