ಇಸ್ಲಾಮಾಬಾದ್: ಭಾರತದಲ್ಲಿ ನಡೆಯುವ ಐಪಿಎಲ್ ಟೂರ್ನಿಗಾಗಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ಐಸಿಸಿ ಚಿಂತನೆಯನ್ನು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನ.15 ರವರೆಗೂ ಟಿ20 ವಿಶ್ವಕಪ್ ನಡೆಯಬೇಕಿದೆ. ಆದರೆ ಕೊರೊನಾ ಕಾರಣದಿಂದ ಕೆಲ ದೇಶಗಳಲ್ಲಿ ಸೆಪ್ಟೆಂಬರ್ ವರೆಗೂ ಲಾಕ್‍ಡೌನ್ ಮುಂದುವರಿಯುವ ಅವಕಾಶವಿರುವುದರಿಂದ 2020ರ ಟೂರ್ನಿಯನ್ನು 2022ಕ್ಕೆ ಮುಂದೂಡುವ ಚಿಂತನೆಯನ್ನು ಐಸಿಸಿ ಮಾಡಿದ್ದಾಗಿ ವರದಿಗಳು ಪ್ರಕಟವಾಗಿದ್ದವು. ಇಂದು ಐಸಿಸಿ ತನ್ನ ಸದಸ್ಯರ ರಾಷ್ಟ್ರಗಳೊಂದಿಗೆ ಸಭೆ ನಡೆಸಲಿದ್ದು, ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.
ಟಿ20 ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಐಪಿಎಲ್ ಆವೃತ್ತಿ ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಕುರಿತು ಈಗಾಗಲೇ ಬಿಸಿಸಿಐ ಅಧ್ಯಕ್ಷರ ಸೌರವ್ ಗಂಗೂಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಸೇರಿದಂತೆ ಕೆಲ ಕ್ರಿಕೆಟ್ ಬೋರ್ಡ್‍ಗಳ ಬೆಂಬಲ ಪಡೆದಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಅಫ್ಘಾನಿಸ್ತಾನದಂತಹ ತಂಡಗಳು ಸದಸ್ಯದ ಸಂದರ್ಭದಲ್ಲಿ ಬಿಸಿಸಿಐಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಅವಕಾಶವಿಲ್ಲ. ಪರಿಣಾಮ ಟಿ20 ವಿಶ್ವಕಪ್ ಮುಂದೂಡಲು ಮತ್ತಷ್ಟು ಬೆಂಬಲ ಲಭಿಸಿತ್ತು.
ಇತ್ತ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ವರದಿಗಳು ಪ್ರಕಟವಾಗುತ್ತಿದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪ್ರತಿಕ್ರಿಯೆ ನೀಡಿದ್ದು, ನಾವು ಇನ್ನು ಮೇ ತಿಂಗಳಿನಲ್ಲಿದ್ದೇವೆ. ಆದ್ದರಿಂದ ಐಸಿಸಿ ಟಿ20 ವಿಶ್ವಕಪ್ ವಿಚಾರದಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕಿದೆ. ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಂದಿನ 2 ತಿಂಗಳ ಬಳಿಕ ನಿರ್ಧಾರವನ್ನು ಪ್ರಕಟಿಸಬಹುದಾಗಿದೆ. ಆದರೆ ಬಿಸಿಸಿಐ ಆಯೋಜಿಸುವ ದೇಶೀಯ ಐಪಿಎಲ್ ಟೂರ್ನಿಗಾಗಿ ಟಿ20 ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ಪಾಕ್ ಕ್ರಿಕೆಟ್ ಬೋರ್ಡ್ ಒಪ್ಪುವುದಿಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.