– ಆಹಾರ ವಿತರಿಸ್ತಿದ್ದಾಗ ಯುವಕ-ಯುವತಿ ಮಧ್ಯೆ ಲವ್
ಲಕ್ನೋ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಇದ್ದರೂ ಅನೇಕರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಲಾಕ್‍ಡೌನ್ ವೇಳೆ ಒಂದು ವಿಶೇಷ ಮದುವೆ ನಡೆದಿದೆ.
ವರ ಅನಿಲ್ ಭಿಕ್ಷೆ ಬೇಡುತ್ತಿದ್ದ ಯುವತಿ ನೀಲಂನನ್ನು ಮದುವೆಯಾಗಿದ್ದಾನೆ. ಕಾನ್ಪುರದಲ್ಲಿ ಲಾಕ್‍ಡೌನ್ ಆರಂಭವಾದ ಸಂದರ್ಭದಲ್ಲಿ ಆಹಾರ ನೀಡುತ್ತಿದ್ದಾಗ ಅನಿಲ್ ಮತ್ತು ನೀಲಂ ಮಧ್ಯೆ ಪ್ರೇಮ ಶುರುವಾಗಿ ಲಾಕ್‍ಡೌನ್ ಮುಗಿಯುವಷ್ಟರಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಇವರ ಮದುವೆ ಇತರರ ವಿವಾಹಗಳಿಗಿಂತ ಭಿನ್ನವಾಗಿದ್ದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಇಲ್ಲದೆ ಆಶ್ರಮದಲ್ಲಿ ನಡೆದಿದೆ.
ಪ್ರೀತಿ ಅರಳಿದ್ದು ಹೇಗೆ?
ಅನಿಲ್ ಲಾಕ್‍ಡೌನ್ ಸಂದರ್ಭದಲ್ಲಿ ತನ್ನ ಯಜಮಾನನ ಸೂಚನೆಯಂತೆ ದಿನವೂ ನಿರ್ಗತಿಕರಿಗೆ ಊಟ ನೀಡಲು ಹೋಗುತ್ತಿದ್ದನು. ಒಂದು ದಿನ ಕಾನ್ಪುರ ಪ್ರದೇಶದಲ್ಲಿ ಫುಟ್‍ಪಾತ್‍ನಲ್ಲಿ ಭಿಕ್ಷೆ ಬೇಡುತ್ತಿದ್ದ ನೀಲಂನನ್ನು ಅನಿಲ್ ನೋಡಿದ್ದಾನೆ. ಆ ಸಮಯದಲ್ಲಿ ಅನಿಲ್‍ಗೆ, ನೀಲಂ ಪರಿಚಯವಾಗಿದೆ. ಪ್ರತಿದಿನ ಇಬ್ಬರು ಮಾತನಾಡಲು ಪ್ರಾರಂಭಿಸಿದರು. ಈ ವೇಳೆ ನೀಲಂ ತನ್ನ ಸಂಕಟವನ್ನು ಅನಿಲ್ ಬಳಿ ಹೇಳಿಕೊಂಡಿದ್ದಾಳೆ. ಒಂದು ದಿನ ಅನಿಲ್ ಭಿಕ್ಷಾಟನೆಯನ್ನು ಬಿಡುವಂತೆ ನೀಲಂಗೆ ಮನವೊಲಿಸಿದ್ದಾನೆ.
ದಿನಕಳೆದಂತೆ ಇಬ್ಬರು ಸ್ನೇಹಿತರಾಗಿದ್ದು, ನೀಲಂನನ್ನು ಅನಿಲ್ ಪ್ರೀತಿಸುತ್ತಿದ್ದನು. ಒಂದು ದಿನ ನೀಲಂಗೆ ತಾನು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ಆಗ ನೀಲಂ ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಶ್ರಮದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಗವಾನ್ ಬುದ್ಧ ಆಶ್ರಮದಲ್ಲಿ ವಿವಾಹವಾಗಿದ್ದಾರೆ.
ವಧು ನೀಲಂ ತಂದೆ ಬಹಳ ಹಿಂದೆಯೇ ಮೃತಪಟ್ಟಿದ್ದಾರೆ. ತಾಯಿಗೆ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ಅಲ್ಲದೇ ಅವರ ಅಣ್ಣ ಮತ್ತು ಅತ್ತಿಗೆ ಇಬ್ಬರನ್ನು ಮನೆಯಿಂದ ಹೊರಗೆ ಹಾಕಿದ್ದರು. ಆಗ ನೀಲಂ ಮತ್ತು ಆಕೆಯ ತಾಯಿ ಎಲ್ಲವೂ ಉಳಿದುಕೊಳ್ಳಲು ಜಾಗ, ತಿನ್ನಲು ಆಹಾರವೂ ಸಿಗಲಿಲ್ಲ. ಹೀಗಾಗಿ ನೀಲಂ ಫುಟ್‍ಪಾತ್‍ನಲ್ಲಿ ಭಿಕ್ಷೆ ಬೇಡಲು ಮುಂದಾಗಿದ್ದಳು.
ನಮಗೆ ಏನೂ ಇಲ್ಲದ ಕಾರಣ ನಾನು ಇತರರೊಂದಿಗೆ ಫುಟ್‍ಪಾತ್‍ನಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದೆ. ಆದರೆ ಕೊರೊನಾ ಲಾಕ್‍ಡೌನ್ ಜೀವನವನ್ನು ಇನ್ನಷ್ಟು ಶೋಚನೀಯಗೊಳಿಸಿತು. ಆಗ ಲಾಕ್‍ಡೌನ್ ಸಂದರ್ಭದಲ್ಲಿ ಅನಿಲ್ ತಮ್ಮ ಇತರ ಸಹಚರರೊಂದಿಗೆ ಪ್ರತಿದಿನ ಬಡವರಿಗೆ ಆಹಾರವನ್ನು ವಿತರಿಸಲು ಬರುತ್ತಿದ್ದರು ಎಂದು ನೀಲಂ ಮಾಧ್ಯಮಗಳಿಗೆ ತಿಳಿಸಿದ್ದಾಳೆ.